ಹೊಸದಿಗಂತ ಡಿಜಿಟಲ್ ಡೆಸ್ಕ್:
“ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವರು ರೇವಣ್ಣ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಎಸ್‌ಐಟಿಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಅಂತಹವರಿಗೆ ಸರ್ಕಾರ ಈಗ ಉಡುಗೊರೆ ನೀಡುತ್ತಿದೆ,” ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಾಸನದ ಬೂವನಹಳ್ಳಿ ಬಳಿ ಆಯೋಜಿಸಲಾಗಿದ್ದ ಬೃಹತ್ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅನಾರೋಗ್ಯದ ನಡುವೆಯೂ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನ ಕೆಡವಲು ವಿರೋಧಿಗಳು ಎರಡು ಬಾರಿ ಸಮಾವೇಶ ನಡೆಸಿದರು. ಆದರೆ, ಇಂದಿನ ಜನಸಾಗರವನ್ನು ನೋಡಿದರೆ ಅವರಿಗೆ ನಿಮ್ಮ ಆಟ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಈ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
“ನನಗೆ ಈಗ 93 ವರ್ಷ ವಯಸ್ಸು. ವಾರದಲ್ಲಿ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ನಿನ್ನೆ ತಾನೇ ಡಯಾಲಿಸಿಸ್ ಮುಗಿಸಿ ಬಂದಿದ್ದೇನೆ. ಕಣ್ಣುಗಳು ಮಂಜಾಗುತ್ತಿದ್ದರೂ ನಿಮ್ಮೆಲ್ಲರ ಪ್ರೀತಿಯನ್ನು ನೋಡಿ ನನಗೆ ಆನಂದವಾಗುತ್ತಿದೆ. ನನ್ನ ಆತ್ಮ ಸ್ವಚ್ಛವಾಗಿದೆ, ನಾನು ಎಂದಿಗೂ ಯಾರಿಗೂ ಅನ್ಯಾಯ ಮಾಡಿದವನಲ್ಲ,” ಎಂದು ಭಾವುಕರಾದರು.
“ಹಿಂದೆ ಇದೇ ಹಾಸನದ ಜನ ನನ್ನನ್ನು ಒಮ್ಮೆ ಸೋಲಿಸಿದ್ದರು. ಆದರೆ ಅದೇ ಜನ 1991ರಲ್ಲಿ ನನ್ನನ್ನು ಸಂಸತ್ತಿಗೆ ಕಳುಹಿಸಿಕೊಟ್ಟರು. ರಾಜಕೀಯವಾಗಿ ನನ್ನನ್ನು ತುಳಿಯಲು ಕೇಸ್‌ಗಳನ್ನು ಹಾಕಿದವರ ವಿರುದ್ಧ ಮೆಟ್ಟಿನಿಂತು ಹೋರಾಟ ಮಾಡಿದ್ದೇನೆ. ನನಗೆ ದೈವದ ಮೇಲೆ ಅಪಾರ ನಂಬಿಕೆಯಿದೆ, ಕಾಲ ಎಲ್ಲದಕ್ಕೂ ಉತ್ತರ ನೀಡಲಿದೆ,” ಎಂದು ಪರೋಕ್ಷವಾಗಿ ಎದುರಾಳಿಗಳಿಗೆ ಟಾಂಗ್ ನೀಡಿದರು.
ರೇವಣ್ಣ ಮತ್ತು ಅವರ ಕುಟುಂಬದ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ಸರ್ಕಾರ ಪುರಸ್ಕಾರ ನೀಡುತ್ತಿದೆ ಎಂದು ಆರೋಪಿಸಿದ ಗೌಡರು, ಜನರೇ ಇಂತಹ ರಾಜಕೀಯಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.



