ಹೊಸದಿಗಂತ ಡಿಜಿಟಲ್ ಡೆಸ್ಕ್:
2023 ಶಾರುಖ್ ಖಾನ್ ಪಾಲಿಗೆ ಅಕ್ಷರಶಃ ಚಿನ್ನದ ವರ್ಷವಾಗಿತ್ತು. ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ಯಂತಹ ಬ್ಯಾಕ್-ಟು-ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದ ಶಾರುಖ್, ಬಾಕ್ಸ್ ಆಫೀಸ್ ಸುಲ್ತಾನ ಎನಿಸಿಕೊಂಡಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ (2024 ಮತ್ತು 2025) ಬೆಳ್ಳಿತೆರೆಯ ಮೇಲೆ ಶಾರುಖ್ ಅಬ್ಬರ ಕಂಡುಬಂದಿಲ್ಲ. ಈ ವರ್ಷದ ಆರಂಭದಲ್ಲಿ ಸಿನಿಮಾ ಬರಬಹುದು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸಣ್ಣ ನಿರಾಸೆಯಾಗಿದ್ದರೂ, ಈಗ ಕಿಂಗ್ ಖಾನ್ ತಮ್ಮ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾ ಈ ವರ್ಷದ ಕ್ರಿಸ್‌ಮಸ್ ಹಬ್ಬದ ಕಾಣಿಕೆಯಾಗಿ ಡಿಸೆಂಬರ್ 24ರಂದು ವಿಶ್ವಾದ್ಯಂತ ತೆರೆಕಾಣಲಿದೆ. “ಡಿಸೆಂಬರ್ 24ಕ್ಕೆ ಕಿಂಗ್ ಘರ್ಜಿಸಲಿದ್ದಾನೆ” ಎಂದು ಸ್ವತಃ ಶಾರುಖ್ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಆಕ್ಷನ್ ಪ್ಯಾಕ್ಡ್ ಸಿನಿಮಾವನ್ನು ಶಾರುಖ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾದ ವಿಶೇಷತೆಯೆಂದರೆ ಶಾರುಖ್ ಖಾನ್ ಜೊತೆ ಅವರ ಪುತ್ರಿ ಸುಹಾನಾ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಾಯಕಿಯಾಗಿ ಶಾರುಖ್ ಅವರ ಲಕ್ಕಿ ಚಾರ್ಮ್ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಣ್ಣ ಟೀಸರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.



