ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರವು “ಬ್ರೋಕರ್ ಹಾಗೂ ಲೂಟಿಕೋರರ” ಪಾಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನದ ಬೂವನಹಳ್ಳಿಯಲ್ಲಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಅಹಿಂದ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿದೆ ಎಂದು ಕಿಡಿಕಾರಿದರು.
“ರಾಜ್ಯವು ನೈಸರ್ಗಿಕವಾಗಿ ಸಂಪದ್ಭರಿತವಾಗಿದೆ. ಆದರೆ ಇಂದು ಈ ಸಂಪತ್ತು ಬ್ರೋಕರ್ಗಳ ಕೈ ಸೇರಿದೆ. ಕಳೆದ ಎರಡುವರೆ ವರ್ಷಗಳಿಂದ ಕೇವಲ ಮುಖ್ಯಮಂತ್ರಿ ಕುರ್ಚಿಗಾಗಿ ನಾಟಕ ನಡೆಯುತ್ತಿದೆಯೇ ಹೊರತು ಅಭಿವೃದ್ಧಿಯಲ್ಲ,” ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಸುಮಾರು 2,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಸರ್ಕಾರಕ್ಕೆ ಅವರ ಬಗ್ಗೆ ಚಿಂತೆಯಿಲ್ಲ. ರೈತರ ಜೀವನದ ಜೊತೆ ಈ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಸಂಸದ ಶ್ರೇಯಸ್ ಪಟೇಲ್ ಅವರ ಟೀಕೆಗಳಿಗೆ ಉತ್ತರಿಸಿದ ಕುಮಾರಣ್ಣ, “ನಮ್ಮ ಕೊಡುಗೆ ಏನು ಎಂದು ಅವರು ಕೇಳುತ್ತಿದ್ದಾರೆ. ನಾವು ನಮ್ಮ ತಪ್ಪುಗಳಿಂದ ಹಾಸನದಲ್ಲಿ ಸೋತಿರಬಹುದು, ಆದರೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ನಾನು ಇಚ್ಛಿಸುವುದಿಲ್ಲ,” ಎಂದು ತಿರುಗೇಟು ನೀಡಿದರು.
ತುಮಕೂರಿನಲ್ಲಿ ಜನರು “2028ರ ಮುಖ್ಯಮಂತ್ರಿ” ಎಂದು ಘೋಷಣೆ ಕೂಗಿದ್ದನ್ನು ಸ್ಮರಿಸಿದ ಅವರು, ಜೆಡಿಎಸ್ ಮುಗಿದುಹೋಯಿತು ಎನ್ನುವವರಿಗೆ ಈ ಸಮಾವೇಶವೇ ಉತ್ತರ ಎಂದರು.
ಮುಂಬರುವ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಆ ಸಂದರ್ಭದಲ್ಲಿ ಸಂಸತ್ತಿನ ಅಧಿವೇಶನದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಮಾತನಾಡಲು ಸಭಾಪತಿಗಳಿಗೆ ಮನವಿ ಮಾಡಿರುವುದಾಗಿ ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.



