ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಎದ್ದಿರುವ ಯುದ್ಧದ ಭೀತಿ ಮತ್ತು ಇರಾನ್‌ನ ಒಳಗಿನ ಆಂತರಿಕ ಪ್ರತಿಭಟನೆಗಳು ಈಗ ಕನ್ನಡಿಗರ ಅಡುಗೆ ಮನೆ ಹಾಗೂ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಲಾರಂಭಿಸಿವೆ. ಭದ್ರತೆಯ ದೃಷ್ಟಿಯಿಂದ ಇರಾನ್ ತನ್ನ ಪ್ರಮುಖ ನೌಕಾ ನೆಲೆಗಳನ್ನು ಮುಚ್ಚಿರುವುದು ಜಾಗತಿಕ ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಿದೆ.
ಇರಾನ್‌ನ ಅತ್ಯಂತ ಪ್ರಮುಖ ರಫ್ತು ಕೇಂದ್ರವಾದ ಬಂಡಾರ್ ಅಬ್ಬಾಸ್ ಬಂದರು ಕಳೆದ ಕೆಲವು ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಭಾರತಕ್ಕೆ ಬರುತ್ತಿದ್ದ ಉತ್ತಮ ಗುಣಮಟ್ಟದ ಡ್ರೈಫ್ರೂಟ್ಸ್ ಹಾಗೂ ಮಸಾಲೆ ಪದಾರ್ಥಗಳ ಪೂರೈಕೆಗೆ ಬ್ರೇಕ್ ಬಿದ್ದಿದೆ. ಸಾಮಾನ್ಯವಾಗಿ ಕರ್ನಾಟಕಕ್ಕೆ ಪ್ರತಿ ತಿಂಗಳು ಇರಾನ್‌ನಿಂದ ಸುಮಾರು 200 ಟನ್ ಒಣಹಣ್ಣುಗಳು ಆಮದಾಗುತ್ತಿದ್ದವು.
ಫೆಬ್ರವರಿ 17-18 ರಿಂದ ಪವಿತ್ರ ರಂಜಾನ್ ಮಾಸ ಆರಂಭವಾಗಲಿದೆ. ಈ ಸಮಯದಲ್ಲಿ ಮುಸ್ಲಿಂ ಬಾಂಧವರು ಉಪವಾಸಕ್ಕಾಗಿ ಅತಿ ಹೆಚ್ಚಾಗಿ ಬಳಸುವ ಮುಜಪತಿ ಖರ್ಜೂರ, ಪಿಸ್ತಾ, ಪೈನಾಬೀಜ ಹಾಗೂ ಮಾರ್ಮಾ ಬಾದಾಮಿಗಳ ಪೂರೈಕೆ ಸ್ಥಗಿತಗೊಂಡಿದೆ. ಹಬ್ಬದ ಹೊತ್ತಲ್ಲೇ ಬೇಡಿಕೆ ಹೆಚ್ಚಾಗುವ ಸಮಯದಲ್ಲಿ ಸರಬರಾಜು ಇಲ್ಲದಿರುವುದು ವ್ಯಾಪಾರಿಗಳನ್ನು ಕಂಗಾಲಾಗಿಸಿದೆ.



