ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮರ್ಮಾಘಾತ ನೀಡಿದೆ. “ನೀವೇನಾದರೂ ವಿಶ್ವಕಪ್‌ನಿಂದ ಹಿಂದೆ ಸರಿದರೆ, ನಿಮ್ಮನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಉಚ್ಚಾಟಿಸಲಾಗುವುದು” ಎಂದು ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶ ತಂಡವನ್ನು ವಿಶ್ವಕಪ್‌ನಿಂದ ಕೈಬಿಟ್ಟ ನಿರ್ಧಾರವನ್ನು ವಿರೋಧಿಸಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ತಮ್ಮ ತಂಡ ಕೂಡ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನ ಎಂಬ ಹೇಳಿಕೆ ನೀಡಿದ್ದಾರೆ. ತಂಡದ ಪಾಲ್ಗೊಳ್ಳುವಿಕೆಯು ಪಾಕಿಸ್ತಾನ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಐಸಿಸಿ ಮತ್ತು ಬಿಸಿಸಿಐಗೆ ಆರ್ಥಿಕ ನಷ್ಟದ ಬೆದರಿಕೆ ಒಡ್ಡಲು ಪಾಕ್ ಯತ್ನಿಸಿದೆ. ವಿಶೇಷವಾಗಿ ಭಾರತ-ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ವಿಶ್ವಕಪ್ ತನ್ನ ಮೆರುಗನ್ನು ಕಳೆದುಕೊಳ್ಳುತ್ತದೆ ಎಂಬುದು ಪಾಕಿಸ್ತಾನದ ಲೆಕ್ಕಾಚಾರ.
ಪಾಕಿಸ್ತಾನದ ಈ ‘ಬಹಿಷ್ಕಾರ’ ತಂತ್ರಕ್ಕೆ ಎದುರೇಟು ನೀಡಿರುವ ಐಸಿಸಿ, ಕಠಿಣ ಕ್ರಮಗಳ ಪಟ್ಟಿಯನ್ನೇ ಸಿದ್ಧಪಡಿಸಿದೆ:
ವಿಶ್ವಕಪ್‌ನಿಂದ ಹಿಂದೆ ಸರಿದರೆ ಅಂತರಾಷ್ಟ್ರೀಯ ಕ್ರಿಕೆಟ್ ಮಾನ್ಯತೆ ರದ್ದತಿ. ಯಾವುದೇ ದೇಶದ ವಿರುದ್ಧ ಸರಣಿ ಆಡುವಂತಿಲ್ಲ. ವಿದೇಶಿ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಲು ಎನ್ಒಸಿ (NOC) ನೀಡದಂತೆ ಕ್ರಮ. ಏಷ್ಯಾಕಪ್‌ನಲ್ಲೂ ಪಾಲ್ಗೊಳ್ಳಲು ಅವಕಾಶ ನಿರಾಕರಣೆ.
ಒಟ್ಟಿನಲ್ಲಿ, ಐಸಿಸಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಹೊರಟ ಪಾಕಿಸ್ತಾನ ಈಗ ತಾನೇ ಇಕ್ಕಟ್ಟಿಗೆ ಸಿಲುಕಿದೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದಲೇ ಶಾಶ್ವತವಾಗಿ ದೂರ ಉಳಿಯುವ ಭೀತಿ ಎದುರಾಗಿರುವುದರಿಂದ ಪಾಕ್ ತಂಡ ಅನಿವಾರ್ಯವಾಗಿ ವಿಶ್ವಕಪ್ ಆಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.



