Sunday, January 25, 2026
Sunday, January 25, 2026
spot_img

ಚಲಿಸುತ್ತಿದ್ದ ಕಾರು, ಬೈಕ್ ಮೇಲೆ ಗಜರಾಜನ ಅಟ್ಯಾಕ್: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

ಹೊಸದಿಗಂತ ವರದಿ ಮಡಿಕೇರಿ:

ಚಲಿಸುತ್ತಿದ್ದ ಕಾರು ಮತ್ತು ಬೈಕಿನ ಮೇಲೆ ಕಾಡಾನೆಯೊಂದು ದಾಳಿ ಮಾಡಿರುವ ಘಟನೆ ಶನಿವಾರ ರಾತ್ರಿ ಸೋಮವಾರಪೇಟೆ ಸಮೀಪದ ಕಾಜೂರು ಬಳಿ ನಡೆದಿದೆ.

ಸೋಮವಾರಪೇಟೆ ನಾಡಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಮಾದಾಪುರ ನಿವಾಸಿ, ರುದ್ರಕುಮಾರ್ (ಸುನಿಲ್) ಅವರು ಪರಿಚಿತರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಸ್ನೇಹಿತರೊಂದಿಗೆ ಕಾರಿನಲ್ಲಿ ಮಾದಾಪುರದಿಂದ ಸೋಮವಾರಪೇಟೆಗೆ ತೆರಳುತ್ತಿದ್ದರು.

ಕಾಜೂರು ಬಳಿ ರಾತ್ರಿ 8 ಗಂಟೆ ಸಮಯದಲ್ಲಿ ಮಾರ್ಗ ಮಧ್ಯೆ ಎದುರಾದ ಕಾಡಾನೆ ಚಲಿಸುತಿದ್ದ ಕಾರಿನ ಮೇಲೆ ಎರಗಿ ಕಾರನ್ನು ಜಖಂಗೊಳಿಸಿದೆ. ಈ ಸಂದರ್ಭ ಕಾರಿನ‌ ಒಳಗಿದ್ದ ಐದು ಮಂದಿಯೂ ಜೋರಾಗಿ ಬೊಬ್ಬಿಟ್ಟಿದ್ದು, ಅವರ ಕಿರುಚಾಟ ಹಾಗೂ ಹಾರ್ನ್ ಶಬ್ಧಕ್ಕೆ ಬೆದರಿದ ಕಾಡಾನೆ ಹಿಂದಕ್ಕೆ ಸರಿದು, ಸೋಮವಾರಪೇಟೆ ಕಡೆಯಿಂದ ಬರುತ್ತಿದ್ದ ಬೈಕ್ ಮೇಲೆ ದಾಳಿ ಮಾಡಿದೆ.

ಕಾಡಾನೆಯ ದಾಳಿಗೆ ಬೈಕ್ ಕೆಳಗೆ ಬಿದ್ದಿದ್ದು, ಜಖಂಗೊಂಡಿದ್ದು, ಸವಾರ ರಸ್ತೆ ಬದಿಯ ಚರಂಡಿಯ ಒಳಗೆ ಹಾರಿ ಅವಿತುಕೊಂಡಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿದ್ದ ರುದ್ರಕುಮಾರ್ (ಸುನಿಲ್) ಹಾಗೂ ಇತರರು ಪ್ರಾಣಾಪಾಯದಿಂದ ಪಾರಾಗಿದ್ದು, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Must Read