Sunday, January 25, 2026
Sunday, January 25, 2026
spot_img

ನೀವೇ ನಮ್ಮ ದೇಶದ ಭಾಗ್ಯವಿಧಾತರು: ಯುವ ಮತದಾರರಿಗೆ ಪ್ರಧಾನಿ ಮೋದಿ ವಿಶೇಷ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಮತದಾರರ ದಿನದ ಸವಿನೆನಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನತೆ ಹಾಗೂ ‘ಮೈ-ಭಾರತ್’ ಸ್ವಯಂಸೇವಕರಿಗೆ ಸ್ಫೂರ್ತಿದಾಯಕ ಪತ್ರವೊಂದನ್ನು ಬರೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರಾಗುವುದು ಕೇವಲ ಹಕ್ಕಲ್ಲ, ಅದೊಂದು ಪವಿತ್ರ ಹೊಣೆಗಾರಿಕೆ ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.

ಯುವಜನತೆ ಮತದಾರರಾಗಿ ನೋಂದಾಯಿಸಿಕೊಳ್ಳುವ ಕ್ಷಣವನ್ನು ಒಂದು ಹಬ್ಬದಂತೆ ಸಂಭ್ರಮಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳು ಮತದಾರರಾಗುವ ಪ್ರಕ್ರಿಯೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

“ನಾವೆಲ್ಲರೂ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ ಪಡಬೇಕು. ಭಾರತವು ಕೇವಲ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಲ್ಲ, ಬದಲಾಗಿ ಶತಮಾನಗಳ ಇತಿಹಾಸವಿರುವ ‘ಪ್ರಜಾಪ್ರಭುತ್ವದ ತಾಯಿ’ ಆಗಿದೆ. ಸಂವಾದ ಮತ್ತು ಚರ್ಚೆಗಳು ನಮ್ಮ ಸಂಸ್ಕೃತಿಯಲ್ಲೇ ಹಾಸುಹೊಕ್ಕಾಗಿವೆ,” ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

1951-52ರಲ್ಲಿ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ 75ನೇ ವರ್ಷದ ಸ್ಮರಣೆಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ ಪ್ರಧಾನಿ, ಅಂದಿನಿಂದ ಇಂದಿನವರೆಗೆ ಭಾರತೀಯರಲ್ಲಿ ಪ್ರಜಾಪ್ರಭುತ್ವದ ಮನೋಭಾವವು ಗಟ್ಟಿಯಾಗಿ ಉಳಿದುಬಂದಿದೆ ಎಂದರು.

“ಮತದಾನದ ವೇಳೆ ಬೆರಳಿಗೆ ಹಾಕುವ ಮಸಿ ಕೇವಲ ಗುರುತಲ್ಲ, ಅದು ಭಾರತದ ಭವಿಷ್ಯವನ್ನು ನಿರ್ಧರಿಸುವ ಶಕ್ತಿ. ಅಭಿವೃದ್ಧಿಯ ಪಯಣದಲ್ಲಿ ಮತದಾರರೇ ನಿಜವಾದ ಭಾಗ್ಯವಿಧಾತರು. ಸಂವಿಧಾನಾತ್ಮಕವಾಗಿ ಸಿಕ್ಕಿರುವ ಈ ಪವಿತ್ರ ಹಕ್ಕನ್ನು ಬಳಸುವ ಮೂಲಕ ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ,” ಎಂದು ಅವರು ದೇಶದ ನಾಗರಿಕರಲ್ಲಿ ವಿನಂತಿಸಿದ್ದಾರೆ.

Must Read