Sunday, January 25, 2026
Sunday, January 25, 2026
spot_img

ಅಬ್ಬಬ್ಬಾ…10 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಮಂಧಾನ ಸ್ನೇಹಿತನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪಲಾಶ್ ಮುಚ್ಚಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಗೀತ ಸಂಯೋಜಕ ಹಾಗೂ ಗಾಯಕ ಪಲಾಶ್ ಮುಚ್ಚಲ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳಿಗೆ ಮೌನ ವಹಿಸುವ ಬದಲು, ಅವರು ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸುಳ್ಳು ಆರೋಪಗಳಿಂದ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಗೌರವಕ್ಕೆ ಧಕ್ಕೆಯಾಗಿದ್ದು, ಅದಕ್ಕಾಗಿ 10 ಕೋಟಿ ರೂ. ಮಾನನಷ್ಟ ದಾವೆ ದಾಖಲಿಸಿರುವುದಾಗಿ ಮುಚ್ಚಲ್ ಸ್ಪಷ್ಟಪಡಿಸಿದ್ದಾರೆ.

ಮರಾಠಿ ನಟ ಹಾಗೂ ನಿರ್ಮಾಪಕ ವಿದ್ನ್ಯಾನ್ ಮಾಣೆ ವಿರುದ್ಧ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಾಣೆ ಅವರು ಮುಚ್ಚಲ್ 40 ಲಕ್ಷ ರೂ. ವಂಚನೆ ಮಾಡಿದ್ದಾರೆ ಹಾಗೂ ಅವರ ವೈಯಕ್ತಿಕ ಬದುಕಿನ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂಬುದು ಮುಚ್ಚಲ್ ವಾದ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ತಮ್ಮ ವಕೀಲ ಶ್ರೇಯಾಂಶ್ ಮಿಥಾರೆ ಮೂಲಕ ಮಾನನಷ್ಟ ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಮಹಾರಾಷ್ಟ್ರದ ಸಂಗ್ಲಿ ಜಿಲ್ಲೆಯಲ್ಲಿ ವಿದ್ನ್ಯಾನ್ ಮಾಣೆ ಮುಚ್ಚಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಸಿನಿಮಾ ಯೋಜನೆಗೆ ಹೂಡಿಕೆ ಮಾಡಿಸಿದ ಬಳಿಕ ಹಣ ವಾಪಸ್ ನೀಡಿಲ್ಲ ಎಂಬುದು ಅವರ ಆರೋಪ. ಆದರೆ ಈ ದೂರಿನ ಸಂಬಂಧ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಮುಚ್ಚಲ್ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ತಮ್ಮನ್ನು ಅಪಖ್ಯಾತಿಗೆ ಒಳಪಡಿಸುವ ಉದ್ದೇಶದಿಂದಲೇ ಇಂತಹ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಮುಚ್ಚಲ್ ಅವರ ವೈಯಕ್ತಿಕ ಜೀವನದ ವಿಚಾರಗಳೂ ಸಾರ್ವಜನಿಕ ಚರ್ಚೆಗೆ ಬಂದಿರುವ ಹಿನ್ನೆಲೆ, ಈ ಪ್ರಕರಣವು ಹೆಚ್ಚಿನ ಗಮನ ಸೆಳೆದಿದೆ. ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಮುಂದಿನ ಬೆಳವಣಿಗೆಗೆ ಕಾದು ಕಾದುನೋಡಬೇಕಿದೆ.

Must Read