ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ನಾಂಪಲ್ಲಿ ಪ್ರದೇಶದಲ್ಲಿರುವ ನಾಲ್ಕು ಮಹಡಿಗಳ ಪೀಠೋಪಕರಣ ಮಳಿಗೆಯಲ್ಲಿ ಭಾನುವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆ ಇಬ್ಬರು ಮಕ್ಕಳು ಸೇರಿದಂತೆ ಐವರ ಪ್ರಾಣವನ್ನು ಕಸಿದುಕೊಂಡಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಕಟ್ಟಡದ ಎರಡು ನೆಲಮಾಳಿಗೆಯಲ್ಲಿ ಹೆಚ್ಚಿನ ಪ್ರಮಾಣದ ಪೀಠೋಪಕರಣಗಳು ಹಾಗೂ ಸುಲಭವಾಗಿ ಬೆಂಕಿ ಹಿಡಿಯುವ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಇದೇ ಭಾಗದಲ್ಲಿ ಮೊದಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ದಟ್ಟವಾದ ಹೊಗೆ ಇಡೀ ಕಟ್ಟಡವನ್ನು ಆವರಿಸಿದೆ.
ದುರ್ಘಟನೆಯಲ್ಲಿ ಮೃತಪಟ್ಟವರ ಮೃತದೇಹಗಳನ್ನು ನೆಲಮಾಳಿಗೆಯಿಂದ ಹೊರತೆಗೆಯಲಾಗಿದ್ದು, ಉಸಿರುಗಟ್ಟಿ ಸಾವಿಗೀಡಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ನಿಖರ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿಯಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಗ್ನಿ ಅವಘಡದ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.



