ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕೆಜಿಎಫ್’ ಮತ್ತು ‘ಸಲಾರ್’ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ಸ್ಯಾಂಡಲ್‌ವುಡ್ ಮೂಲದ ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್, ಈಗ ಜೂ. ಎನ್ಟಿಆರ್ ಜೊತೆಗೂಡಿ ‘ಡ್ರ್ಯಾಗನ್’ ಎಂಬ ಬೃಹತ್ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಈ ಸಿನಿಮಾದ ಕುರಿತಾದ ಪ್ರತಿ ಅಪ್‌ಡೇಟ್ ಈಗ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ.
ಬಾಲಿವುಡ್‌ನ ಎವರ್‌ಗ್ರೀನ್ ನಟ ಅನಿಲ್ ಕಪೂರ್ ಈಗ ‘ಡ್ರ್ಯಾಗನ್’ ತಂಡವನ್ನು ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಂದೀಪ್ ರೆಡ್ಡಿ ವಂಗಾ ಅವರ ‘ಅನಿಮಲ್’ ಸಿನಿಮಾದಲ್ಲಿ ಅಬ್ಬರಿಸಿದ್ದ ಅನಿಲ್, ಈಗ ಪ್ರಶಾಂತ್ ನೀಲ್ ಕೆತ್ತಲಿರುವ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸ್ವತಃ ಅನಿಲ್ ಕಪೂರ್ ಅವರೇ ಐಎಂಡಿಬಿ (IMDb) ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ.
ಇದುವರೆಗಿನ ಸಿನಿಮಾಗಳನ್ನು ಭಾರತದ ಗಡಿಯೊಳಗೆ, ಸೆಟ್‌ಗಳ ಮಧ್ಯೆ ಅದ್ಧೂರಿಯಾಗಿ ಚಿತ್ರೀಕರಿಸುತ್ತಿದ್ದ ಪ್ರಶಾಂತ್ ನೀಲ್, ಈಗ ಮೊದಲ ಬಾರಿಗೆ ಗಡಿ ದಾಟಿದ್ದಾರೆ. ‘ಡ್ರ್ಯಾಗನ್’ ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ಸೀನ್‌ಗಳಿಗಾಗಿ ಚಿತ್ರತಂಡ ಆಫ್ರಿಕಾ ಪ್ರವಾಸ ಬೆಳೆಸಿದೆ. ಆಫ್ರಿಕಾದ ಕಗ್ಗತ್ತಲ ಕಾಡು ಹಾಗೂ ವಿಭಿನ್ನ ಲೊಕೇಶನ್‌ಗಳಲ್ಲಿ ಜೂ. ಎನ್ಟಿಆರ್ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲು ನೀಲ್ ಪ್ಲಾನ್ ಮಾಡಿದ್ದಾರೆ.
ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇವರ ಜೊತೆಗೆ ಮಲಯಾಳಂನ ಸ್ಟಾರ್ ನಟ ಟೊವಿನೋ ಥಾಮಸ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೊವಿನೋ ಅವರಿಗೆ ಇದು ಮೊದಲ ತೆಲುಗು ಚಿತ್ರವಾಗಿದ್ದು, ಅವರ ಪಾತ್ರದ ಮೇಲೆ ಭಾರೀ ನಿರೀಕ್ಷೆ ಇದೆ.
ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದ್ದು, ಈ ವರ್ಷದ (2026) ಅಂತ್ಯದ ವೇಳೆಗೆ ‘ಡ್ರ್ಯಾಗನ್’ ಬೆಳ್ಳಿತೆರೆಯ ಮೇಲೆ ಅಬ್ಬರಿಸುವ ಸಾಧ್ಯತೆ ಇದೆ. ಕನ್ನಡದ ಹಲವು ಕಲಾವಿದರು ಕೂಡ ಈ ಸಿನಿಮಾದಲ್ಲಿದ್ದು, ನೀಲ್ ಮತ್ತೆ ತವರು ಮಣ್ಣಿನ ನಟರಿಗೆ ಮಣೆ ಹಾಕಿದ್ದಾರೆ.



