ಹೊಸ ದಿಗಂತ ವರದಿ, ಬಳ್ಳಾರಿ:
ಬ್ಯಾನರ್ ಗಲಾಟೆ ಪ್ರಕರಣ ಹಾಗೂ ನಮ್ಮ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ಹಾದಿ ತಪ್ಪುತ್ತಿದೆ. ಬ್ಯಾನರ್ ಗಲಾಟೆ, ಗುಂಡಿನ ದಾಳಿ ಪ್ರಕರಣ ನಡೆದು ಇಲ್ಲಿಗೆ 25 ದಿನ ಕಳೆದರೂ ಪೊಲೀಸರು, ಸಿಐಡಿ ಅಧಿಕಾರಿಗಳು ಇಲ್ಲಿವರೆಗೂ ಒಬ್ಬರನ್ನೂ ಬಂಧಿಸಿಲ್ಲ, ವಿಚಾರಣೆ ನಡೆಸಿಲ್ಲ, ಪೊಲೀಸರನ್ನು ಬಳಸಿ ಇಡಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ, ನ್ಯಾಯ ಸಿಗಬೇಕಾದರೆ ಕೂಡಲೇ ಸರ್ಕಾರ ಎರಡು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಒಡೆತನದ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಪೊಲೀಸರು ತಿರುಚಲು ಮುಂದಾಗಿದ್ದಾರೆ. ಕೂಡಲೇ ಎಎಸ್ಪಿ ರವಿಕುಮಾರ್ ಹಾಗೂ ನಗರ ಡಿವೈಎಸ್ಪಿ ಚಂದ್ರಕಾಂತ್ ನಂದಾ ರೆಡ್ಡಿ ಅವರನ್ನು ಅಮಾನತುಗೊಳಿಸಿ ಜಿಲ್ಲೆಯಿಂದ ಕಳುಹಿಸಬೇಕು. ಇಲ್ಲದಿದ್ದರೆ ನ್ಯಾಯ ಸಿಗುವ ವಿಶ್ವಾಸವಿಲ್ಲ. ನಮ್ಮ ಮಾಡೆಲ್ ಹೌಸ್ ಗೆ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿ ಸಾಕಷ್ಟು ಹಾನಿ ಮಾಡಿದ್ದಾರೆ, ಈ ಕುರಿತು ದೂರು ದಾಖಲಿಸಿದರೆ, ಹೊಸದಾಗಿ ಬಂದ ಎಸ್ಪಿ ಡಾ.ಸುಮನ್ ಡಿ.ಪೆನ್ನಕರ್ ಅವರು, ರೀಲ್ಸ್ ಮಾಡಲು ತೆರಳಿದ ಅಪ್ರಾಪ್ತರು ಸಿಗರೇಟ್ ಸೇದುವಾಗ ಬೆಂಕಿ ತಗುಲಿ ಈ ಘಟನೆ ನಡೆದಿದೆ, ಪಾಳು ಬಿದ್ದ ಮನೆ, ಇಲ್ಲಿಯಾರು ವಾಸ ಮಾಡೋಲ್ಲ, ಸಿಬ್ಬಂದಿಗಳು ಇಲ್ಲ ಅಂತಾರೆ, ಇದು ಶುದ್ಧ ಸುಳ್ಳು, ಪಾಳು ಬಿದ್ದ ಮನೆಯಲ್ಲ ಅದು ಗ್ರಾಹಕರಿಗೆ ತೋರಿಸಲು ಕೋಟ್ಯಂತರ ವೆಚ್ಚದ ಮಾದರಿ ಮನೆ, ಇಲ್ಲಿ ಇಬ್ಬರು ಸಿಬ್ಬಂದಿಗಳು ಇದ್ದಾರೆ, 200 ಎಕರೆ ಪ್ರದೇಶ ಇರುವ ಹಿನ್ನೆಲೆ ಇಬ್ಬರೂ ಸುತ್ತಾಡಲು ಹೋದಾಗ, ವ್ಯವಸ್ಥಿತವಾಗಿ ನಮ್ಮ ಮಾಡೆಲ್ ಹೌಸ್ ಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಕಡೆಯವರು ಬೆಂಕಿ ಹಚ್ಚಿದ್ದಾರೆ, ಪೊಲೀಸರ ಪ್ರಕಾರ ರೀಲ್ಸ್ ಮಾಡಿದ್ದಾರೆ ಅಂದ್ರೆ, ಕೂಡಲೇ ಅದರ ವಿಡಿಯೋ ಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಬೆಂಕಿ ಉರಿಯುತ್ತಿರುವಾಗ ನಮ್ಮ ಸಿಬ್ಬಂದಿಗಳು ಸೆರೆ ಹಿಡಿದ ವಿಡಿಯೋಗಳನ್ನು ಮಾಧ್ಯಮದವರಿಗೆ, ಪೊಲೀಸರಿಗೆ ಕಳುಹಿಸಿದ್ದು, ಅದರಲ್ಲಿರುವ ವಶಕ್ಕೆ ಪಡೆದು ನೆಪಕ್ಕೆ ತನಿಖೆ ಮುಂದುವರೆಸಿದ್ದಾರೆ. ಬಂಧಿತರಿಂದ ನಮ್ಮ ಸೈಟ್ ಎಂಜಿನಿಯರ್ ಗಳಾದ ರಿಜ್ವಾನ್ ಹಾಗೂ ಇಮ್ರಾನ್ ಅವರ ಎದುರು ಹಾಜರುಪಡಿಸಿ, ಇವರೆ ವಿಡಿಯೋ ಮಾಡಿದ್ದು ಎಂದು ಪೊಲೀಸರು ಹೇಳಿಕೆ ಕೊಡಿಸಿ ಪ್ರಕರಣದ ದಿಕ್ಕನ್ನೇ ಬದಲಿಸಲು ಮುಂದಾಗಿದ್ದಾರೆ. ಎಸ್ಪಿ ಡಾ.ಸುಮನ್ ಅವರು ನೀಡಿದ ಹೇಳಿಕೆ ಸತ್ಯಕ್ಕೆ ದೂರವಾಗಿದೆ, ನೈಜತೆಯನ್ನು ಮರೆಮಾಚಲು ಮುಂದಾದ ಎಎಸ್ಪಿ ರವಿ ಕುಮಾರ್, ಡಿವೈಎಸ್ಪಿ ನಂದಾ ರೆಡ್ಡಿ ಅವರ ವಿರುದ್ಧ ಕ್ರಮಕೈಗೊಂಡು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು, ಅಂದಾಗ ಮಾತ್ರ ನ್ಯಾಯ ಸಿಗಲಿದೆ, ಇವರಿಬ್ಬರೂ ಭರತ್ ರೆಡ್ಡಿ ಅವರ ಬೆನ್ನಿಗೆ ನಿಂತು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿಯಿಂದ ಬೆಂಗಳೂರು ನಗರದ ವರೆಗೆ ಪಾದಯಾತ್ರೆ ನಡೆಸುವ ಕುರಿತು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸಿದ್ದು, ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ದಿನಾಂಕ ಘೋಷಿಸಲಾಗುವುದು ಎಂದರು.
ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಕೆಲ ವಿಡಿಯೋಗಳನ್ನು ಬಿಡುಗಡೆಗೊಳಿಸಿ ಪ್ರಕರಣದಲ್ಲಿ ಭಾಗಿಯಾದವರ ಹೆಸರು ಹಾಗೂ ಮಾಹಿತಿಯನ್ನು ಬಿಚ್ಚಿಟ್ಟರು. ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು, ಇಲ್ಲಿವರೆಗೂ ಯಾವುದೇ ದಾಖಲೆಗಳನ್ನು ಪಡೆದಿಲ್ಲ, ತನಿಖೆ ನಡೆಸಿಲ್ಲ, ಲೋಕಲ್ ಪೊಲೀಸರಿಂದ ಪಂಚನಾಮೆ ಹೊರತು ಪಡಿಸಿ ಯಾವುದೇ ತನಿಖೆ ಕೈಗೊಂಡಿಲ್ಲ, ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ನಮ್ಮ ಅವಧಿಯಲ್ಲಿನ 7 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೇವೆ ಎನ್ನುವ ಸಿ.ಎಂ.ಸಿದ್ದರಾಮಯ್ಯ ಅವರು ಬ್ಯಾನರ್ ಗಲಾಟೆ, ಬೆಂಕಿ ಹಚ್ಚಿದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಕರಣದಲ್ಲಿ ಹಲ್ಲೆಗೆ ಒಳಗಾದ ನಮ್ಮವರು ಮರುದಿನ ಬೆಳಿಗ್ಗೆ ತನಿಖೆಗೆ ಸಹಕರಿಸಿದ್ದಾರೆ. ಏನು ಪೆಟ್ಟು ಬೀಳದೇ ದೊಡ್ಡ ಮಟ್ಟದ ಗಾಯಗಳಾಗಿವೆ ಎಂದು ಬಿಂಬಿಸುತ್ತಿರುವ ಸತೀಶ್ ರೆಡ್ಡಿ ಅವರನ್ನು ಪೊಲೀಸರೇ ರಕ್ಷಣೆಗೆ ಮುಂದಾಗಿದ್ದಾರೆ, ಇದರಲ್ಲಿ ರವಿಕುಮಾರ್ ಹಾಗೂ ನಂದಾ ರೆಡ್ಡಿ ಅವರ ಪಾತ್ರ ದೊಡ್ಡದಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸoಸದ ಸಣ್ಣ ಫಕೀರಪ್ಪ, ಮಾಜಿ ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು ಸೇರಿ ಕೆ.ಎಸ್.ದಿವಾಕರ್,ಜಿ. ವೆಂಕಟರಮಣ, ದಮ್ಮೂರು ಶೇಖರ್ ಇದ್ದರು..



