ಭಾರತವು ಪ್ರತಿವರ್ಷ ಜನವರಿ 26 ರಂದು ಅತ್ಯಂತ ಸಡಗರದಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. 1950 ರ ಜನವರಿ 26 ರಂದು ನಮ್ಮ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತು ಎಂಬುದು ನಮಗೆಲ್ಲ ತಿಳಿದಿದೆ. ಆದರೆ, ಸಂವಿಧಾನ ಸಿದ್ಧವಾಗಿದ್ದರೂ (ನವೆಂಬರ್ 26, 1949 ರಲ್ಲೇ ಸಿದ್ಧವಾಗಿತ್ತು) ಜಾರಿಗೆ ತರಲು ಜನವರಿ 26 ರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಒಂದು ಐತಿಹಾಸಿಕ ಕಾರಣವಿದೆ.
ಇತಿಹಾಸದ ಹಿನ್ನಲೆ:
1929 ರ ಡಿಸೆಂಬರ್‌ನಲ್ಲಿ ಲಾಹೋರ್‌ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್ಯ’ (ಸಂಪೂರ್ಣ ಸ್ವಾತಂತ್ರ್ಯ) ಪಡೆಯುವ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯದ ಸ್ಮರಣಾರ್ಥವಾಗಿ, ಬ್ರಿಟಿಷರ ಆಡಳಿತದಲ್ಲಿದ್ದಾಗಲೇ 1930 ರ ಜನವರಿ 26 ರಂದು ಮೊದಲ ಬಾರಿಗೆ ಭಾರತದಾದ್ಯಂತ ಸ್ವಾತಂತ್ರ್ಯ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು.
ನಂತರ 1947 ರ ಆಗಸ್ಟ್ 15 ರಂದು ನಮಗೆ ಅಧಿಕೃತವಾಗಿ ಸ್ವಾತಂತ್ರ್ಯ ಸಿಕ್ಕಿತು. ಆದರೆ, 1930 ರಲ್ಲಿ ಕೈಗೊಂಡ ಆ ‘ಪೂರ್ಣ ಸ್ವರಾಜ್ಯ’ದ ಸಂಕಲ್ಪದ ದಿನವನ್ನು (ಜನವರಿ 26) ಮರೆಯಬಾರದು ಎಂಬ ಕಾರಣಕ್ಕೆ, ನಮ್ಮ ಸಂವಿಧಾನವನ್ನು ಅದೇ ದಿನದಂದು ಜಾರಿಗೆ ತರಲಾಯಿತು.
1950 ರ ಜನವರಿ 26 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿತವಾದ ಸಂವಿಧಾನ ಜಾರಿಗೆ ಬಂದಿತು. ಅಂದಿನಿಂದ ಭಾರತವು ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಯಿಂದ ಮುಕ್ತವಾಗಿ, ಜನರಿಂದ ಜನರಿಗಾಗಿ ನಡೆಯುವ ‘ಪ್ರಜಾಪ್ರಭುತ್ವ ಸಾರ್ವಭೌಮ ಗಣರಾಜ್ಯ’ವಾಗಿ ಹೊರಹೊಮ್ಮಿತು.
ನೆನಪಿರಲಿ.. ಜನವರಿ 26 ಕೇವಲ ಒಂದು ದಿನಾಂಕವಲ್ಲ, ಅದು ಕೋಟ್ಯಂತರ ಭಾರತೀಯರ ಹೋರಾಟ ಮತ್ತು ಸ್ವಾಭಿಮಾನದ ಸಂಕೇತ.



