ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ 77ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲು ರಾಜ್ಯ ರಾಜಧಾನಿ ಬೆಂಗಳೂರು ಸಜ್ಜಾಗಿದೆ. ನಗರದ ಪ್ರತಿಷ್ಠಿತ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಸರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಪೊಲೀಸ್ ಪಡೆಗಳ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ವೈಭವಕ್ಕೆ ವೇದಿಕೆ ಸಿದ್ಧವಾಗಿದೆ.
ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖ ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಬಾರಿಯ ಪರೇಡ್‌ನಲ್ಲಿ ತಮಿಳುನಾಡು ಪೊಲೀಸರು ಭಾಗವಹಿಸುತ್ತಿರುವುದು ವಿಶೇಷ. ಇವರೊಂದಿಗೆ ಸೇನೆ, ಏರ್‌ಫೋರ್ಸ್, ಸಿಆರ್‌ಪಿಎಫ್ ಮಹಿಳಾ ಪಡೆ, ಎನ್‌ಸಿಸಿ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ ಒಟ್ಟು 1,100 ಮಂದಿ ಪಥಸಂಚಲನ ನಡೆಸಲಿದ್ದಾರೆ.
ವಿವಿಧ ಶಾಲೆಗಳ ಸುಮಾರು 1,400 ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಾಹನ ಸವಾರರ ಗಮನಕ್ಕೆ :
ಬೆಳಿಗ್ಗೆ 8.30ರಿಂದ 10.30ರವರೆಗೆ ಮೈದಾನದ ಸುತ್ತಮುತ್ತ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ನಿರ್ಬಂಧಿತ ರಸ್ತೆಗಳು: ಕಬ್ಬನ್ ರಸ್ತೆ, ಕಾಮರಾಜ ರಸ್ತೆ, ಬಿಆರ್‌ವಿ ರಸ್ತೆ, ಎಂ.ಜಿ ರಸ್ತೆ (ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ).
ಇನ್ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆ ಹೋಗುವವರು ಸಫೀನಾ ಪ್ಲಾಜಾ ಬಳಿ ಎಡತಿರುವು ಪಡೆದು, ಮೈನ್‌ಗಾರ್ಡ್ ರಸ್ತೆ ಮತ್ತು ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆಯನ್ನು ತಲುಪಲು ಸೂಚಿಸಲಾಗಿದೆ.
ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರವೇಶಾತಿಗಾಗಿ ವಿಶೇಷ ‘ಕಲರ್ ಕೋಡ್’ ಪಾಸ್‌ಗಳನ್ನು ವಿತರಿಸಲಾಗಿದೆ. ತುರ್ತು ಸೇವೆಗಳಿಗೆ ಗೇಟ್ ಸಂಖ್ಯೆ 2 ಮತ್ತು ಮಾಧ್ಯಮದವರಿಗೆ ಗೇಟ್ ಸಂಖ್ಯೆ 4ರಲ್ಲಿ ಪ್ರವೇಶ ಕಲ್ಪಿಸಲಾಗಿದೆ.




