ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಬಲಿಷ್ಠ ಟಿ20 ಲೀಗ್ ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ದಶಕಗಳ ದಾಖಲೆಯನ್ನು ಆಸ್ಟ್ರೇಲಿಯಾದ ಪರ್ತ್ ಸ್ಕಾಚರ್ಸ್ ಅಳಿಸಿ ಹಾಕಿದೆ. ಬಿಗ್ ಬ್ಯಾಷ್ ಲೀಗ್‌ನ (BBL 15) ಫೈನಲ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಮಣಿಸುವ ಮೂಲಕ ಪರ್ತ್ ಪಡೆ 6ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ, ಇಡೀ ವಿಶ್ವದಲ್ಲೇ ಅತಿ ಹೆಚ್ಚು ಲೀಗ್ ಟ್ರೋಫಿ ಗೆದ್ದ ತಂಡ ಎಂಬ ಹೊಸ ಇತಿಹಾಸ ಬರೆದಿದೆ.
ಐಪಿಎಲ್‌ನಲ್ಲಿ ತಲಾ 5 ಬಾರಿ ಟ್ರೋಫಿ ಗೆದ್ದಿದ್ದ ಮುಂಬೈ ಮತ್ತು ಚೆನ್ನೈ ತಂಡಗಳ ದಾಖಲೆ ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ.
ಸಿಡ್ನಿ ಸಿಕ್ಸರ್ಸ್ ನೀಡಿದ್ದ 133 ರನ್ ಗುರಿಯನ್ನು ಕೇವಲ 17.3 ಓವರ್‌ಗಳಲ್ಲಿ ಬೆನ್ನಟ್ಟಿದ ಪರ್ತ್ ಸ್ಕಾಚರ್ಸ್ ಅಧಿಕೃತವಾಗಿ ‘ವಿಶ್ವ ಚಾಂಪಿಯನ್ ಲೀಗ್ ತಂಡ’ ಎನಿಸಿಕೊಂಡಿತು.
2013 ರಿಂದ ಆರಂಭವಾದ ಪರ್ತ್ ಸ್ಕಾಚರ್ಸ್ ಹವಾ, 2025-26ರ ಸೀಸನ್ ವರೆಗೂ ಮುಂದುವರಿದು 6ನೇ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.




