Monday, January 26, 2026
Monday, January 26, 2026
spot_img

ಪ್ರಾದೇಶಿಕ ಅಸಮಾನತೆಗೆ ಮುಕ್ತಿ, ಸಾಮಾಜಿಕ ಚೈತನ್ಯಕ್ಕೆ ನಾಂದಿ: ರಾಜ್ಯದ ಸಾಧನೆಗೆ ಗೆಹ್ಲೋಟ್ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಮಾಣೆಕ್‌ ಷಾ ಪರೇಡ್ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಸರ್ಕಾರದ ಜನಪರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಸಂವಿಧಾನದ ಆಶಯಗಳಾದ ಭಾತೃತ್ವ, ಸ್ವಾತಂತ್ರ್ಯ ಮತ್ತು ಸಮಾನತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಆಯೋಗಗಳನ್ನು ರಚಿಸಿ, ಅವರ ಶಿಫಾರಸುಗಳನ್ನು ಜಾರಿಗೊಳಿಸುವ ಮೂಲಕ ‘ಅಲಕ್ಷಿತರಿಗೆ’ ಆಡಳಿತದಲ್ಲಿ ಧ್ವನಿ ನೀಡಲಾಗುತ್ತಿದೆ.

ರಾಜ್ಯದ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆ ರಾಜ್ಯಪಾಲರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ಜನಕಲ್ಯಾಣಕ್ಕಾಗಿ ವಾರ್ಷಿಕ 1.12 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳಿಗಾಗಿಯೇ ಇದುವರೆಗೆ 1.13 ಲಕ್ಷ ಕೋಟಿ ರೂ. ಗೂ ಹೆಚ್ಚು ಹಣ ವಿನಿಯೋಗಿಸಲಾಗಿದೆ.

ಈ ಯೋಜನೆಗಳಿಂದಾಗಿ ಸಾಮಾನ್ಯ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ ಮತ್ತು ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತಿವೆ ಎಂದು ಅವರು ತಿಳಿಸಿದರು.

ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಕರ್ನಾಟಕವು ದೇಶದ ಇತರ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಇದು ರಾಜ್ಯದ ಆರೋಗ್ಯಕರ ಆರ್ಥಿಕತೆಗೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಹೊಸ ಸಾಮಾಜಿಕ ಮತ್ತು ರಾಜಕೀಯ ಚೈತನ್ಯ ಉದಯಿಸುತ್ತಿದೆ ಎಂದು ರಾಜ್ಯಪಾಲರು ಆಶಾವಾದ ವ್ಯಕ್ತಪಡಿಸಿದರು.

Must Read