ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಡಗರ ಮನೆಮಾಡಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ಅದ್ಧೂರಿ ಪರೇಡ್‌ನಲ್ಲಿ ಇಂದು ಇಡೀ ವಿಶ್ವದ ಕಣ್ಣು ಭಾರತದ ರಕ್ಷಣಾ ಬಲದ ಮೇಲಿದೆ. ಈ ಬಾರಿಯ ಮೆರವಣಿಗೆಯ ಪ್ರಮುಖ ಆಕರ್ಷಣೆ ಎಂದರೆ ಅದು ಭಾರತೀಯ ವಾಯುಪಡೆಯ ಹೆಮ್ಮೆಯ S-400 ‘ಸುದರ್ಶನ ಚಕ್ರ’ ವಾಯು ರಕ್ಷಣಾ ವ್ಯವಸ್ಥೆ.
ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗದ ಈ S-400 ವ್ಯವಸ್ಥೆಯು, ‘ಆಪರೇಷನ್ ಸಿಂಧೂರ’ ಸಮಯದಲ್ಲಿ ತನ್ನ ಅಪ್ರತಿಮ ಶಕ್ತಿಯನ್ನು ಸಾಬೀತುಪಡಿಸಿತ್ತು. ಅಂದು ಪಾಕಿಸ್ತಾನದ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಮೂಲಕ ಭಾರತದ ಗಡಿಯನ್ನು ಕಾಪಾಡಿದ್ದ ಈ ‘ಗೇಮ್ ಚೇಂಜರ್’, ಇಂದು ರಕ್ಷಣಾ ಇಲಾಖೆಯ ಟ್ಯಾಬ್ಲೋ ವಿಭಾಗದಲ್ಲಿ ಗರ್ವದಿಂದ ಸಾಗುತ್ತಿದೆ.
2018ರಲ್ಲಿ ರಷ್ಯಾದೊಂದಿಗೆ ಸುಮಾರು 5.5 ಶತಕೋಟಿ ಡಾಲರ್ ವೆಚ್ಚದಲ್ಲಿ ಈ ಒಪ್ಪಂದ ನಡೆದಿತ್ತು. ಚೀನಾದಂತಹ ಬಲಿಷ್ಠ ರಾಷ್ಟ್ರಗಳ ಮಿಲಿಟರಿ ಸವಾಲನ್ನು ಎದುರಿಸಲು ಭಾರತ ಈ ನಿರ್ಧಾರ ಕೈಗೊಂಡಿತ್ತು.
ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಒಪ್ಪಂದದ ಕೊನೆಯ ಎರಡು ಘಟಕಗಳು 2026 ಮತ್ತು 2027ರ ವೇಳೆಗೆ ಭಾರತದ ಕೈಸೇರಲಿವೆ.
ಈ ಬಾರಿಯ ಪರೇಡ್‌ನಲ್ಲಿ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳು ಭಾಗವಹಿಸಿವೆ. ಆದರೆ, S-400 ಪ್ರದರ್ಶನವು ಭಾರತದ ರಕ್ಷಣಾ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಈ ಯಶಸ್ವಿ ಕಾರ್ಯಾಚರಣೆಯ ನಂತರ ಜಾಗತಿಕ ಮಟ್ಟದಲ್ಲೂ S-400 ವ್ಯವಸ್ಥೆಗೆ ಬೇಡಿಕೆ ಕುದುರಿದೆ.




