ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದು, ದೆಹಲಿಯ ಕರ್ತವ್ಯ ಪಥವು ಭಾರತೀಯ ಸೇನೆಯ ಅಭೂತಪೂರ್ವ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನಡೆದ ಈ ಪರೇಡ್‌ನಲ್ಲಿ, ವಿಶೇಷ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹಾಗೂ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಭಾಗವಹಿಸಿ ಮೆರುಗು ನೀಡಿದರು.
ಇದೇ ಮೊದಲ ಬಾರಿಗೆ ಸೇನೆಯ ಅತ್ಯಾಧುನಿಕ ಡ್ರೋನ್‌ಗಳು ಪರೇಡ್‌ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದವು. ‘ಗರುಡಾ’ ಫಾರ್ಮೇಶನ್‌ನಲ್ಲಿ ಹಾರಿದ ಅಪಾಚೆ ಮತ್ತು ಧ್ರುವ ಹೆಲಿಕಾಪ್ಟರ್‌ಗಳು ವೀಕ್ಷಕರಲ್ಲಿ ರೋಮಾಂಚನ ಉಂಟುಮಾಡಿದವು.

ಪರಾವಲಂಬನೆಯನ್ನು ಮೆಟ್ಟಿನಿಂತ ಪ್ರಮುಖ ಶಸ್ತ್ರಾಸ್ತ್ರಗಳು:
ಯುದ್ಧ ಟ್ಯಾಂಕ್‌ಗಳು: ಭೀಷ್ಮ (T-90) ಟ್ಯಾಂಕ್‌ಗಳ ಗಂಭೀರ ನಡಿಗೆ.
ಕ್ಷಿಪಣಿ ಸಾಮರ್ಥ್ಯ: ಬ್ರಹ್ಮೋಸ್ ಸೂಪರ್ ಸಾನಿಕ್, ನಾಗ್ ಮಿಸೈಲ್ ಸಿಸ್ಟಮ್, ಆಕಾಶ್ ಮತ್ತು ಅಭರ ಮಧ್ಯಮ ರೇಂಜ್ ಕ್ಷಿಪಣಿಗಳು.
ಅತ್ಯಾಧುನಿಕ ತಂತ್ರಜ್ಞಾನ: ಶಕ್ತಿಬಾನ್, ದಿವ್ಯಾಸ್ತ್ರ, ಸೂರ್ಯಾಸ್ತ್ರ ರಾಕೆಟ್ ಲಾಂಚರ್ ಮತ್ತು ಧನುಷ್-ಅಮೋಘ್ ಸಿಸ್ಟಮ್‌ಗಳ ಬಲ ಪ್ರದರ್ಶನ.
ರಕ್ಷಣಾ ಪಡೆಯ ಜೊತೆಗೆ, ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯ ನೆನಪಿಗಾಗಿ ವಿಶೇಷ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು. ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ದೇಶದ ಇತ್ತೀಚಿನ ಅಭಿವೃದ್ಧಿಯ ಮೈಲಿಗಲ್ಲುಗಳನ್ನು ಬಿಂಬಿಸುವ ಟ್ಯಾಬ್ಲೋಗಳು ಜನರ ಮನಗೆದ್ದವು. ವಿಶೇಷವಾಗಿ ‘ಆಪರೇಷನ್ ಸಿಂಧೂರ್’ ಕುರಿತಾದ ಸ್ತಬ್ಧಚಿತ್ರವು ಸೇನೆಯ ಶೌರ್ಯದ ಕಥೆಯನ್ನು ಮರುಕಳಿಸುವಂತೆ ಮಾಡಿತು.




