ಹೊಸದಿಗಂತ ಮಂಗಳೂರು:
ದೇಶಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟು, ಪ್ರಸ್ತುತ ಗಾಲಿಕುರ್ಚಿ ಸಹಾಯದಿಂದ ಜೀವನ ಸಾಗಿಸುತ್ತಿರುವ ಭಾರತೀಯ ಸೇನೆಯ ಕಮಾಂಡೋ, ತನ್ನದೇ ಊರಿನಲ್ಲಿ ಅದೂ ಗಣರಾಜ್ಯೋತ್ಸವ ಮುನ್ನಾದಿನ ತೀವ್ರ ಅವಮಾನಕ್ಕೀಡಾದ ಘಟನೆ ಸಾಸ್ತಾನ ಟೋಲ್ ಬೂತ್ ನಲ್ಲಿ ನಡೆದಿದ್ದು, ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ನಡೆದಿದ್ದೇನು?
ಕಾಸರಗೋಡಿನ ಎಡನೀರು ಬಳಿಯ ಎದಿರ್ತೋಡು ನಿವಾಸಿ ವೀರಯೋಧ ಶ್ಯಾಮರಾಜ್, ಜನವರಿ 25ರಂದು ಸಾಸ್ತಾನದ ಟೋಲ್ ಬೂತ್ ಮೂಲಕ ಸಂಚರಿಸುತ್ತಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಪಾಸ್, ಸರ್ಕಾರಿ ಆದೇಶ ಪ್ರತಿ ತೋರಿಸಿದರೂ ಅವರನ್ನು ಗಂಟೆಗಟ್ಟಲೆ ತಡೆದು ನಿಲ್ಲಿಸಿ, ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಮಗಾದ ಈ ಅವಮಾನ, ಅನ್ಯಾಯದ ಬಗ್ಗೆ ಶ್ಯಾಮರಾಜ್ ಅವರೇ ಸ್ವತಃ ವೀಡಿಯೋ ಚಿತ್ರೀಕರಿಸಿ ನೋವನ್ನು ಹಂಚಿಕೊಂಡಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ.
ಇದು ಕೇವಲ ಒಬ್ಬ ವ್ಯಕ್ತಿಗೆ ಆದ ಅವಮಾನವಲ್ಲ, ನಮ್ಮ ದೇಶದ ಯೋಧ ಸಂಸ್ಕೃತಿಗೆ ಎಸಗಿದ ಅವಮಾನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶ್ಯಾಮರಾಜ್ ಅವರಿಗೆ ನ್ಯಾಯ ಸಿಗಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಸಮಸ್ತ ಕನ್ನಡಿಗರು ಒಂದಾಗಬೇಕಿದೆ. ಶೀಘ್ರದಲ್ಲೇ ಸಭೆ ಸೇರಿ, ಈ ಅಕ್ರಮದ ವಿರುದ್ಧ ಸಾತ್ವಿಕ ಪ್ರತಿಭಟನೆ ನಡೆಸುವ ಮೂಲಕ ನಮ್ಮ ಯೋಧನ ಘನತೆಯನ್ನು ಎತ್ತಿಹಿಡಿಯಲು ನಿರ್ಧರಿಸಬೇಕು ಎಂಬ ಬರಹಗಳೂ ಜಾಲತಾಣದಲ್ಲಿ ಹರಿದಾಡುತ್ತಿವೆ.




