ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಹಳೆ ಬಾಗಲಕೋಟೆಯ ತೆಂಗನಮಠ ಓಣಿಯಲ್ಲಿ ಬೀದಿ ನಾಯಿಗಳು ಅಕ್ಷರಶಃ ಅಟ್ಟಹಾಸ ಮೆರೆದಿವೆ. ಪ್ರವಚನ ಮುಗಿಸಿ ಭಕ್ತಿಯಿಂದ ಮನೆಗೆ ಮರಳುತ್ತಿದ್ದ ಜನರ ಮೇಲೆ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದು, ಹತ್ತಕ್ಕೂ ಹೆಚ್ಚು ಮಂದಿ ರಕ್ತಸಿಕ್ತ ಗಾಯಗೊಂಡಿದ್ದಾರೆ.
ತೆಂಗನಮಠ ಓಣಿಯಲ್ಲಿ ಆಯೋಜಿಸಲಾಗಿದ್ದ ಪ್ರವಚನ ಕಾರ್ಯಕ್ರಮ ಮುಗಿಸಿಕೊಂಡು ಭಕ್ತರು ಗುಂಪಾಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಹೊಂಚು ಹಾಕಿದ್ದ ಬೀದಿ ನಾಯಿಗಳು ಒಮ್ಮೆಲೇ ಜನರ ಮೇಲೆರಗಿವೆ. ಈ ದಾಳಿಯಲ್ಲಿ ಪುಟ್ಟ ಮಕ್ಕಳು ಸೇರಿ ವೃದ್ಧರೂ ಸಹ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
“ಬೀದಿ ನಾಯಿಗಳ ಹಾವಳಿ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಸ್ಥಳೀಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಮಕ್ಕಳನ್ನು ರಸ್ತೆಗೆ ಬಿಡಲು ಭಯವಾಗುತ್ತಿದೆ,” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನವೇ ಇಂದಿನ ಈ ಘಟನೆಗೆ ಕಾರಣ ಎಂದು ಕಿಡಿಕಾರಿದ ಸಾರ್ವಜನಿಕರು, ಕೂಡಲೇ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.




