ಹೊಸದಿಗಂತ ಡಿಜಿಟಲ್ ಡೆಸ್ಕ್:
77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾರತವನ್ನು ಮುಕ್ತವಾಗಿ ಹೊಗಳಿದ್ದಾರೆ. “ಸಂಘರ್ಷಭರಿತ ಜಗತ್ತಿನಲ್ಲಿ ಭಾರತ ಮತ್ತು ಯುರೋಪ್ ‘ಸಂವಾದ’ದ ಮೂಲಕ ಹೊಸ ಹಾದಿ ತೋರಿಸುತ್ತಿವೆ. ಭಾರತದ ಯಶಸ್ಸು ಇಡೀ ಜಗತ್ತನ್ನು ಸುರಕ್ಷಿತವಾಗಿರಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಈಗ ಜೀವ ಬಂದಿದೆ. ಪ್ರಧಾನಿ ಮೋದಿ ಮತ್ತು ಉರ್ಸುಲಾ ಅವರ ನಡುವಿನ ಶೃಂಗಸಭೆಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಲಿದೆ. ಇದು ಕೇವಲ ವ್ಯಾಪಾರವಲ್ಲ, ತಂತ್ರಜ್ಞಾನ ಮತ್ತು ಆರ್ಥಿಕತೆಯ ಮಹಾಸಂಗಮ ಎನ್ನಲಾಗುತ್ತಿದೆ.
ಸಾಮಾನ್ಯ ಗ್ರಾಹಕರಿಗೆ ಮತ್ತು ಉದ್ಯಮಿಗಳಿಗೆ ಲಾಭವೇನು?
ಯುರೋಪಿಯನ್ ಕಾರುಗಳ ಮೇಲಿನ ಆಮದು ಸುಂಕವನ್ನು ಶೇ. 110 ರಿಂದ ಶೇ. 40ಕ್ಕೆ ಇಳಿಸಲಾಗುತ್ತಿದೆ. ಇದರಿಂದ ಮರ್ಸಿಡಿಸ್, BMW ನಂತಹ ಕಾರುಗಳ ಬೆಲೆಯಲ್ಲಿ 10 ರಿಂದ 50 ಲಕ್ಷ ರೂ. ವರೆಗೆ ಕಡಿತವಾಗುವ ಸಾಧ್ಯತೆಯಿದೆ.
ಭಾರತದ ಜವಳಿ, ಚರ್ಮದ ವಸ್ತುಗಳು, ಆಭರಣ ಮತ್ತು ಐಟಿ ಸೇವೆಗಳಿಗೆ ಯುರೋಪ್‌ನ 27 ರಾಷ್ಟ್ರಗಳಲ್ಲಿ ತೆರಿಗೆ ಮುಕ್ತ ಮಾರುಕಟ್ಟೆ ಸಿಗಲಿದೆ.
ಹಸಿರು ಇಂಧನ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಯುರೋಪ್ ತನ್ನ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ.
ಅಮೆರಿಕದ ‘ಅಮೆರಿಕ ಫಸ್ಟ್’ ನೀತಿಯಿಂದ ಉಂಟಾಗಬಹುದಾದ ಆರ್ಥಿಕ ಒತ್ತಡಕ್ಕೆ ಈ ಒಪ್ಪಂದವು ಭಾರತಕ್ಕೆ ಭದ್ರ ಬುನಾದಿ ಒದಗಿಸಲಿದೆ. ಚೀನಾಕ್ಕೆ ಪರ್ಯಾಯವಾಗಿ ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಕೇಂದ್ರವನ್ನಾಗಿ ಮಾಡಲು ಯುರೋಪ್ ಉತ್ಸುಕವಾಗಿದೆ.




