ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಪರ್ವತಗಳನ್ನು ಕಣ್ತುಂಬಿಕೊಳ್ಳಲು ಯುರೋಪ್‌ಗೆ ಹೋಗಬೇಕೆಂದೇನಿಲ್ಲ. ಉತ್ತರ ಭಾರತದ ಹೃದಯಭಾಗದಲ್ಲೇ ಸ್ವಿಟ್ಜರ್ಲ್ಯಾಂಡ್‌ನ ಪ್ರತಿರೂಪದಂತಿರುವ ಒಂದು ಸುಂದರ ಸ್ಥಳವಿದೆ. ಅದೇ ಹಿಮಾಚಲ ಪ್ರದೇಶದ ಖಜ್ಜಿಯಾರ್. ಹಸಿರು ಹುಲ್ಲುಗಾವಲು, ಸುಂದರ ಕಾಡುಗಳು, ಮೃದುವಾಗಿ ಹರಡುವ ಮೋಡಗಳು ಈ ಎಲ್ಲವೂ ಸೇರಿ ಖಜ್ಜಿಯಾರ್ ಅನ್ನು “ಭಾರತದ ಮಿನಿ ಸ್ವಿಟ್ಜರ್ಲ್ಯಾಂಡ್” ಎಂದು ಕರೆಯುವಂತೆ ಮಾಡಿವೆ. ಪ್ರಕೃತಿಯ ಮಡಿಲಲ್ಲಿ ಶಾಂತಿ ಹುಡುಕುವವರಿಗೆ ಇದು ಭಾರತದ್ಲಲೇ ನೋಡಬಹುದಾದ ಪರಿಪೂರ್ಣ ತಾಣ.

ಖಜ್ಜಿಯಾರ್‌ಗೆ ಪ್ರಯಾಣಿಸುವುದು ಸುಲಭ. ನಿಮ್ಮ ಊರಿನ ಪ್ರಮುಖ ವಿಮಾನ ನಿಲ್ದಾಣದಿಂದ ಹತ್ತಿರದ ಪ್ರಮುಖ ಪಟ್ಟಣ ಧರ್ಮಶಾಲಾ. ಅಲ್ಲಿಂದ ರಸ್ತೆ ಮಾರ್ಗವಾಗಿ ಸುಮಾರು ಎರಡು ಗಂಟೆಗಳ ಪ್ರಯಾಣ. ಪಠಾಣ್ಕೋಟ್ ಹತ್ತಿರದ ರೈಲು ನಿಲ್ದಾಣವಾಗಿದ್ದು, ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಸೌಲಭ್ಯ ಲಭ್ಯ. ಚಂಡೀಗಢ ಅಥವಾ ದೆಹಲಿಯಿಂದಲೂ ರಸ್ತೆ ಮೂಲಕ ಸುಲಭವಾಗಿ ತಲುಪಬಹುದು.

ಇಲ್ಲಿ ನೋಡಲೇಬೇಕಾದ ಪ್ರಮುಖ ಸ್ಥಳ ಖಜ್ಜಿಯಾರ್ ಸರೋವರ. ಸುತ್ತಲಿನ ಹಸಿರು ಮೈದಾನಗಳು ಫೋಟೋಗ್ರಫಿಗೆ ಸೂಕ್ತ. ಸಾಹಸಪ್ರಿಯರಿಗೆ ಪ್ಯಾರಾಗ್ಲೈಡಿಂಗ್, ಕುದುರೆ ಸವಾರಿ ಕೂಡ ಇದೆ. ಸಮೀಪದಲ್ಲೇ ಇರುವ ಕಾಲಟೋಪ್ ವನ್ಯಜೀವಿ ಅಭಯಾರಣ್ಯ ಪ್ರಕೃತಿ ನಡಿಗೆಗೆ ಅತ್ತ್ಯುತ್ತಮ.

ಮಾರ್ಚ್‌ನಿಂದ ಜೂನ್ ಹಾಗೂ ಸೆಪ್ಟೆಂಬರ್‌ನಿಂದ ನವೆಂಬರ್ ವರೆಗೆ ಖಜ್ಜಿಯಾರ್‌ಗೆ ಭೇಟಿ ನೀಡಲು ಉತ್ತಮ ಸಮಯ. ಗದ್ದಲವಿಲ್ಲದ, ನೈಸರ್ಗಿಕ ಸೌಂದರ್ಯದೊಂದಿಗೆ ಮನಸ್ಸು ಹಗುರಾಗುವ ಅನುಭವ ಖಜ್ಜಿಯಾರ್‌ನಲ್ಲಿ ಖಂಡಿತ ಸಿಗುತ್ತದೆ.




