ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಟಿವಿ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮೂಲಕ ಮನೆಮಗಳಾಗಿ ಗುರುತಿಸಿಕೊಂಡಿದ್ದ ನಟಿ ಸಂಜನಾ ಬುರ್ಲಿ ಇದೀಗ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಸದ್ದಿಲ್ಲದೇ ನಡೆದ ಈ ಬೆಳವಣಿಗೆ ಅಭಿಮಾನಿಗಳಿಗೆ ಅಚ್ಚರಿಯ ಜೊತೆಗೆ ಖುಷಿಯನ್ನೂ ತಂದಿದೆ.
ಧಾರಾವಾಹಿಯಲ್ಲಿ ಸ್ನೇಹ ಪಾತ್ರದ ಮೂಲಕ ದಿಟ್ಟತೆ, ಸಂವೇದನೆ ಮತ್ತು ಕುಟುಂಬ ಮೌಲ್ಯಗಳನ್ನು ಪ್ರತಿಬಿಂಬಿಸಿದ ಸಂಜನಾ, ಕೆಲವೇ ದಿನಗಳಲ್ಲಿ ಕನ್ನಡ ಮನೆಮಾತಾಗಿದ್ದರು. “ಪ್ರತಿ ಮನೆಯಲ್ಲಿ ಸ್ನೇಹದಂತಹ ಮಗಳು ಇರಬೇಕು” ಎನ್ನುವಷ್ಟು ಆ ಪಾತ್ರ ಜನಮನ ಗೆದ್ದಿತ್ತು. ‘ಪುಟ್ಟಕ್ಕನ ಮಕ್ಕಳು’ ನಂತರವೂ ಸಂಜನಾ ತಮ್ಮ ನಟನಾ ಪಯಣವನ್ನು ಮುಂದುವರಿಸಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಶ್ರೀಗಂಧದ ಗುಡಿ’ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಸಂಜನಾ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈದ್ಯ ಸಮರ್ಥ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಮರ್ಥ್ ವೃತ್ತಿಯಲ್ಲಿ ವೈದ್ಯರಾಗಿದ್ದು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದವರು ಎಂದು ತಿಳಿದುಬಂದಿದೆ.
ನಿಶ್ಚಿತಾರ್ಥದ ನಂತರ ಸಂಜನಾ ನಟನೆಯಲ್ಲಿ ಮುಂದುವರಿಯುತ್ತಾರಾ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಪ್ರಸ್ತುತ ‘ಶ್ರೀಗಂಧದ ಗುಡಿ’ಯಲ್ಲಿ ಅವರು ದಿಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ನಟನಾ ಪಯಣ ಮುಂದುವರಿಯುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.




