Monday, January 26, 2026
Monday, January 26, 2026
spot_img

ಪ್ರಜಾಪ್ರಭುತ್ವವೇ ಭಾರತ–ಅಮೆರಿಕ ಸಂಬಂಧದ ಸೇತುವೆ: ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಟ್ರಂಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿರುವ ಸಂದರ್ಭದಲ್ಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಅಧಿಕೃತವಾಗಿ ಶುಭಾಶಯಗಳನ್ನು ಕಳುಹಿಸಿದ್ದಾರೆ. ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೂಲಕ ಈ ಸಂದೇಶವನ್ನು ಹಂಚಿಕೊಂಡಿದ್ದು, ಎರಡು ರಾಷ್ಟ್ರಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಅಮೆರಿಕದ ಜನರ ಪರವಾಗಿ ಭಾರತ ಸರ್ಕಾರ ಮತ್ತು ಜನತೆಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿರುವ ಟ್ರಂಪ್, ಭಾರತ ಮತ್ತು ಅಮೆರಿಕ ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಮೌಲ್ಯಗಳು ಮತ್ತು ಸಂವಿಧಾನಾತ್ಮಕ ಪರಂಪರೆಯಿಂದ ಒಂದಾಗಿವೆ ಎಂದು ಹೇಳಿದ್ದಾರೆ. ಹಲವು ದಶಕಗಳಿಂದ ಎರಡೂ ದೇಶಗಳು ಸ್ನೇಹ ಮತ್ತು ಸಹಕಾರದ ಸಂಬಂಧವನ್ನು ಉಳಿಸಿಕೊಂಡು ಬಂದಿವೆ ಎಂಬುದನ್ನೂ ಅವರು ನೆನಪಿಸಿದ್ದಾರೆ.

ಇತ್ತ, ಭಾರತದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಅವರು ಕರ್ತವ್ಯ ಮಾರ್ಗದಲ್ಲಿ ಭಾಗವಹಿಸಿದರು. ಈ ಅನುಭವವನ್ನು ಅವರು ದ್ವಿಪಕ್ಷೀಯ ಸಂಬಂಧಗಳ ಜೀವಂತ ಸಂಕೇತವೆಂದು ಬಣ್ಣಿಸಿದ್ದಾರೆ. ಗಣರಾಜ್ಯೋತ್ಸವದ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ ನಿರ್ಮಿತ C-130J ಸಾರಿಗೆ ವಿಮಾನ ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು ಹಾರಿದ ಕ್ಷಣ ರೋಮಾಂಚನಕಾರಿ ಅನುಭವ ನೀಡಿತು ಎಂದು ಗೋರ್ ಅಭಿಪ್ರಾಯಪಟ್ಟರು.

ಇತ್ತೀಚೆಗೆ ವ್ಯಾಪಾರ ಸುಂಕ ವಿಚಾರವಾಗಿ ಉಂಟಾದ ಒತ್ತಡದ ನಡುವೆಯೂ, ಈ ಶುಭಾಶಯ ಸಂದೇಶವು ಭಾರತ–ಅಮೆರಿಕ ಸಂಬಂಧಗಳ ಮಹತ್ವವನ್ನು ಮತ್ತೆ ಒತ್ತಿ ಹೇಳುವಂತಾಗಿದೆ.

Must Read