ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೂ ದಿನಗಳು ಬಾಕಿ ಇರುವಾಗಲೇ ಪಾಕಿಸ್ತಾನ ಕ್ರಿಕೆಟ್ ವಲಯ ಹೊಸ ವಿವಾದಕ್ಕೆ ಸಿಲುಕಿದೆ. ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಹೊರಗಿಟ್ಟ ಐಸಿಸಿ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಪಾಕಿಸ್ತಾನ, ಇದೀಗ ಭಾರತ ವಿರುದ್ಧದ ಪಂದ್ಯವನ್ನೇ ಆಡದಿರಲು ಬೆದರಿಕೆ ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆಯ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಾಡಿದ ಒಂದು ತಪ್ಪು, ಅವರನ್ನು ಜಾಗತಿಕವಾಗಿ ನಗೆಪಾಟಲಿಗೆ ಗುರಿಮಾಡಿದೆ.
ಜನವರಿ 26ರಂದು ನಖ್ವಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾಗಿ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆ ಕುರಿತು ಚರ್ಚೆ ನಡೆಸಿದರು. ಈ ಸಭೆಯ ವಿವರ ಹಂಚಿಕೊಳ್ಳಲು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಪ್ರಧಾನಿ ಹೆಸರನ್ನೇ ತಪ್ಪಾಗಿ ಉಲ್ಲೇಖಿಸಿದ್ದಾರೆ. ಹಾಲಿ ಪ್ರಧಾನಿ ಶಹಬಾಜ್ ಷರೀಫ್ ಬದಲು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಹೆಸರನ್ನು ಬರೆದಿರುವುದು ಭಾರೀ ಟೀಕೆಗೆ ಕಾರಣವಾಯಿತು.
ಪೋಸ್ಟ್ ಅಳಿಸುವಷ್ಟರಲ್ಲಿ ಅದರ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿ, ನಖ್ವಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾದರು.



