ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜತಾಂತ್ರಿಕತೆಯಲ್ಲಿ ಇಂದು ಮಹತ್ವದ ಬೆಳವಣಿಗೆಯೊಂದು ನಡೆಯಲಿದ್ದು, ಭಾರತ ಮತ್ತು ಯುರೋಪಿಯನ್ ಒಕ್ಕೂಟ ಬಹುನಿರೀಕ್ಷಿತ ‘ಮುಕ್ತ ವ್ಯಾಪಾರ ಒಪ್ಪಂದ’ಕ್ಕೆ ಸಹಿ ಹಾಕಲಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಆರ್ಥಿಕ ನೀತಿಗಳಿಂದ ಸೃಷ್ಟಿಯಾಗಿರುವ ಅನಿಶ್ಚಿತತೆಯನ್ನು ಎದುರಿಸಲು ಈ ಒಪ್ಪಂದವು ಎರಡೂ ಕಡೆಗಳಿಗೆ ಆನೆಬಲ ನೀಡಲಿದೆ.
ಈ ಒಪ್ಪಂದದಿಂದ ಸುಮಾರು 200 ಕೋಟಿ ಜನಸಂಖ್ಯೆಯನ್ನು ಒಳಗೊಂಡ ಬೃಹತ್ ಮಾರುಕಟ್ಟೆ ಸೃಷ್ಟಿಯಾಗಲಿದೆ. ಇದು ಜಾಗತಿಕ ಒಟ್ಟು ಆಂತರಿಕ ಉತ್ಪನ್ನದ (GDP) ಸುಮಾರು 25% ರಷ್ಟು ಪಾಲನ್ನು ಹೊಂದಿರಲಿದೆ.
ಯುರೋಪ್ ರಾಷ್ಟ್ರಗಳು ಅಮೆರಿಕ ಮತ್ತು ಚೀನಾದ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತದಂತಹ ವಿಶ್ವಾಸಾರ್ಹ ಪಾಲುದಾರರೊಂದಿಗೆ ಆರ್ಥಿಕ ಸಂಬಂಧ ಗಟ್ಟಿಗೊಳಿಸಲು ಮುಂದಾಗಿವೆ.
ಕೇವಲ ವ್ಯಾಪಾರ ಮಾತ್ರವಲ್ಲದೆ, ‘ರಕ್ಷಣಾ ಚೌಕಟ್ಟಿನ ಒಪ್ಪಂದ’ದ ಮೂಲಕ ರಕ್ಷಣೆ, ಹವಾಮಾನ ಬದಲಾವಣೆ ಮತ್ತು ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎರಡೂ ಕಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರಿಗೆ ಆತಿಥ್ಯ ವಹಿಸಲಿದ್ದಾರೆ. ವಿಶೇಷವೆಂದರೆ, ಇವರಿಬ್ಬರೂ ಭಾರತದ 77 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
2004 ರಿಂದಲೇ ಕಾರ್ಯತಂತ್ರದ ಪಾಲುದಾರರಾಗಿರುವ ಭಾರತ ಮತ್ತು EU, ಪ್ರಸ್ತಾವಿತ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ (SDP) ಮೂಲಕ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮಲಿವೆ.



