ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರೀಮಿಯರ್ ಲೀಗ್‌ನ 16ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲೊಪ್ಪಿಕೊಂಡಿರಬಹುದು, ಆದರೆ ತನ್ನ ಹೋರಾಟದ ಗುಣದಿಂದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗುವಂತಹ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ನ್ಯಾಟ್ ಸೀವರ್ ಬ್ರಂಟ್ ಅವರ ಸ್ಫೋಟಕ ಶತಕದ (57 ಎಸೆತಗಳಲ್ಲಿ 100*) ನೆರವಿನಿಂದ 4 ವಿಕೆಟ್ ನಷ್ಟಕ್ಕೆ 199 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಗುರಿ ಬೆನ್ನತ್ತಿದ ಆರ್‌ಸಿಬಿ ಕೇವಲ 35 ರನ್‌ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು.

ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ರಿಚಾ ಘೋಷ್ 90 ರನ್ ಸಿಡಿಸಿ ಪಂದ್ಯಕ್ಕೆ ಜೀವ ತುಂಬಿದರು. ಅಂತಿಮವಾಗಿ ಆರ್‌ಸಿಬಿ 184 ರನ್‌ಗಳಿಸಿ, 15 ರನ್‌ಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿತು.
ಸೋಲಿನ ನಡುವೆಯೂ ಆರ್‌ಸಿಬಿ WPL ಇತಿಹಾಸದಲ್ಲೇ ಹಿಂದೆಂದೂ ಕಾಣದ ದಾಖಲೆಯೊಂದನ್ನು ಬರೆದಿದೆ. 50 ರನ್‌ಗಳ ಒಳಗೆ 5 ವಿಕೆಟ್ ಕಳೆದುಕೊಂಡ ನಂತರವೂ 150ಕ್ಕೂ ಅಧಿಕ ರನ್ (ಒಟ್ಟು 184 ರನ್) ಗಳಿಸಿದ ಮೊದಲ ತಂಡ ಎಂಬ ಕೀರ್ತಿಗೆ ಆರ್‌ಸಿಬಿ ಪಾತ್ರವಾಗಿದೆ. ತಂಡದ ಈ ಕೆಚ್ಚೆದೆಯ ಹೋರಾಟ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.



