ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ ತಲುಪಿರುವ ಬೆನ್ನಲ್ಲೇ, ಅಮೆರಿಕವು ಯುರೋಪ್ ವಿರುದ್ಧ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುರೋಪ್ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಎಚ್ಚರಿಸಿದ್ದಾರೆ.
ಪರೋಕ್ಷ ಧನಸಹಾಯ: ಯುರೋಪ್ ನೇರವಾಗಿ ರಷ್ಯಾದಿಂದ ಇಂಧನ ಖರೀದಿಯನ್ನು ನಿಲ್ಲಿಸಿರಬಹುದು. ಆದರೆ, ಭಾರತದಲ್ಲಿ ಸಂಸ್ಕರಿಸಿದ ರಷ್ಯಾದ ತೈಲ ಉತ್ಪನ್ನಗಳನ್ನು ಖರೀದಿಸುವ ಮೂಲಕ ರಷ್ಯಾ-ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಹಣ ಒದಗಿಸುತ್ತಿದೆ ಎಂಬುದು ಬೆಸೆಂಟ್ ಅವರ ಆರೋಪ.
“ರಷ್ಯಾದ ಆರ್ಥಿಕತೆಯನ್ನು ಕಟ್ಟಿಹಾಕಲು ಅಮೆರಿಕ ದೊಡ್ಡ ಮಟ್ಟದ ತ್ಯಾಗ ಮಾಡುತ್ತಿದ್ದರೆ, ಯುರೋಪ್ ಮಾತ್ರ ಜಾಗತಿಕ ತೈಲ ಮಾರುಕಟ್ಟೆಯ ಲೋಪದೋಷಗಳನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿದೆ” ಎಂದು ಅವರು ಟೀಕಿಸಿದ್ದಾರೆ.
ಟ್ರಂಪ್ ಆಡಳಿತವು ಈಗಾಗಲೇ ಭಾರತದ ಮೇಲೆ 50% ಸುಂಕ ವಿಧಿಸಿದೆ (ಇದರಲ್ಲಿ ರಷ್ಯಾ ತೈಲ ಖರೀದಿಗೆ ಸಂಬಂಧಿಸಿದ 25% ಸುಂಕವೂ ಸೇರಿದೆ). ಇಂತಹ ಸಂದರ್ಭದಲ್ಲಿ ಯುರೋಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ.
ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಅಂತಿಮಗೊಂಡಿದ್ದು, ಇಂದು ಅಧಿಕೃತವಾಗಿ ಘೋಷಣೆಯಾಗಲಿದೆ.



