Tuesday, January 27, 2026
Tuesday, January 27, 2026
spot_img

ನಷ್ಟದ ಸುಳಿಯಲ್ಲಿ ಪಾಕಿಸ್ತಾನ: ಇಸ್ಲಾಮಾಬಾದ್‌ ಏರ್‌ಪೋರ್ಟ್ ನಿರ್ವಹಣೆಗೆ ‘ನೋ’ ಎಂದ ಯುಎಇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ಅನಿರೀಕ್ಷಿತ ಹಿನ್ನಡೆಯಾಗಿದೆ. ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಳ್ಳುವ ಮಾತುಕತೆಯಿಂದ ಸಂಯುಕ್ತ ಅರಬ್ ಎಮಿರೇಟ್ಸ್ ದಿಢೀರನೆ ಹಿಂದೆ ಸರಿದಿದೆ.

ವಿಶೇಷವೆಂದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಡುವೆ ನಡೆದ ಸುದೀರ್ಘ ಒಂದೂವರೆ ಗಂಟೆಯ ಮಾತುಕತೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದು ರಾಜತಾಂತ್ರಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ವಿಮಾನ ನಿಲ್ದಾಣದ ಹೊರಗುತ್ತಿಗೆ ನಿರ್ವಹಣೆಗೆ ಅಗತ್ಯವಿರುವ ಸ್ಥಳೀಯ ಉದ್ಯಮ ಪಾಲುದಾರರು ಸಿಗದ ಕಾರಣ ಯುಎಇ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.

ಯೆಮೆನ್ ವಿಷಯದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳು ಕೂಡ ಈ ನಿರ್ಧಾರದ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯಿದೆ.

ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಮಿಲಿಟರಿ ಹಸ್ತಕ್ಷೇಪ ಹೆಚ್ಚಾಗಿದ್ದು, ಆರ್ಥಿಕ ನಷ್ಟದ ಭೀತಿಯಿಂದ ವಿದೇಶಿ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ.

ಪ್ರಸ್ತುತ ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಯುಎಇ, ಈಗ ಪಾಕಿಸ್ತಾನದ ಪ್ರಸ್ತಾವನೆಯಿಂದ ಹಿಂದೆ ಸರಿದಿರುವುದು ಇಸ್ಲಾಮಾಬಾದ್‌ಗೆ ಆರ್ಥಿಕವಾಗಿ ದೊಡ್ಡ ಹೊಡೆತ ನೀಡಿದಂತಾಗಿದೆ. ನಷ್ಟದಲ್ಲಿರುವ ತನ್ನ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾಗಿರುವ ಪಾಕಿಸ್ತಾನಕ್ಕೆ ಈಗ ನಂಬಿಕಸ್ಥ ಹೂಡಿಕೆದಾರರ ಹುಡುಕಾಟ ಸವಾಲಾಗಿ ಪರಿಣಮಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !