ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಕ್ಯಾಶ್ ಲಾಜಿಸ್ಟಿಕ್ ಸಂಸ್ಥೆಗಳ ಸಿಬ್ಬಂದಿಯೇ ಹಣ ಲೂಟಿ ಮಾಡುತ್ತಿರುವ ಪ್ರಕರಣಗಳು ಆತಂಕ ಮೂಡಿಸುತ್ತಿವೆ. ಸಿಎಂಎಸ್ ಕಂಪನಿಯ ರಾಬರಿ ಪ್ರಕರಣದ ಬೆನ್ನಲ್ಲೇ, ಈಗ ಹಿಟಾಚಿ ಪೇಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಬ್ಬಂದಿಗಳು ಎಟಿಎಂಗೆ ತುಂಬಬೇಕಿದ್ದ ಬರೋಬ್ಬರಿ 1.40 ಕೋಟಿ ರೂಪಾಯಿ ಹಣದೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಎಸ್‌ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಎಟಿಎಂಗಳಿಗೆ ಹಣ ಜಮೆ ಮಾಡುವ ಜವಾಬ್ದಾರಿ ಹೊತ್ತಿದ್ದ ಎರಡು ಪ್ರತ್ಯೇಕ ತಂಡಗಳು ಈ ವಂಚನೆ ಎಸಗಿವೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಕೋರಮಂಗಲದ ಆಕ್ಸಿಸ್ ಬ್ಯಾಂಕ್‌ನಿಂದ ಎಟಿಎಂಗಳಿಗೆ ತುಂಬಲು ಹಣ ಪಡೆದ ಸಿಬ್ಬಂದಿಗಳು, ಅದನ್ನು ನಿಗದಿತ ಎಟಿಎಂಗಳಿಗೆ ಜಮೆ ಮಾಡದೆ ದುರುಪಯೋಗಪಡಿಸಿಕೊಂಡಿದ್ದಾರೆ.
ಪ್ರವೀಣ್, ಧನಶೇಖರ್, ರಾಮಕ್ಕ ಮತ್ತು ಹರೀಶ್ ಕುಮಾರ್ ಎಂಬುವವರ ತಂಡ ಸುಮಾರು ₹57 ಲಕ್ಷ ಹಣದೊಂದಿಗೆ ಪರಾರಿಯಾಗಿದೆ.
ಹರೀಶ್ ಕುಮಾರ್, ಪ್ರವೀಣ್ ಕುಮಾರ್ ಮತ್ತು ವರುಣ್ ಎಂಬುವವರ ತಂಡ ₹80 ಲಕ್ಷ ಹಣವನ್ನು ಲಪಟಾಯಿಸಿದೆ.
ಒಟ್ಟಾರೆ 1.40 ಕೋಟಿ ರೂಪಾಯಿ ಹಣವನ್ನು ನಂಬಿಕಸ್ತ ಸಿಬ್ಬಂದಿಗಳೇ ವಂಚಿಸಿರುವುದು ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಕೋರಮಂಗಲ ಪೊಲೀಸರು ಬ್ಯಾಂಕ್‌ನಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.



