ಹೊಸದಿಗಂತ ಯಾದಗಿರಿ:
ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಕಳೆದ ಕೆಲವು ತಿಂಗಳಿಂದ ಚಿರತೆ ಉಪಟಳ ತಾರಕಕ್ಕೇರಿದೆ. ಸೋಮವಾರ ಬೆಟ್ಟದ ಸಮೀಪ ಮೇಯುತ್ತಿದ್ದ ಹಸುವಿನ ಮೇಲೆ ಚಿರತೆ ಭೀಕರ ದಾಳಿ ನಡೆಸಿದ್ದು, ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಭೀತಿ ಮನೆಮಾಡಿದೆ.
ಕಳೆದ ಸುಮಾರು ಏಳೆಂಟು ತಿಂಗಳಿಂದ ಗ್ರಾಮದ ಪಕ್ಕದ ಬೆಟ್ಟದಲ್ಲಿ ಚಿರತೆ ಬೀಡುಬಿಟ್ಟಿದೆ ಎಂಬುದು ಗ್ರಾಮಸ್ಥರ ದೂರು. ಆಹಾರ ಅರಸಿ ಆಗಾಗ ಬೆಟ್ಟದಿಂದ ಕೆಳಗಿಳಿಯುವ ಕಾಡುಪ್ರಾಣಿ, ಸಾಕುಪ್ರಾಣಿಗಳನ್ನು ಗುರಿಯಾಗಿಸುತ್ತಿದೆ. ಈ ಹಿಂದೆ ಕೂಡ ಹಸುಗಳ ಮೇಲೆ ದಾಳಿ ನಡೆದಿದ್ದು, ಇದೀಗ ಮತ್ತೊಂದು ಹಸುವನ್ನು ಗಾಯಗೊಳಿಸುವ ಮೂಲಕ ಚಿರತೆ ತನ್ನ ಉಪಸ್ಥಿತಿಯನ್ನು ಸಾರಿದೆ.
ಚಿರತೆಯ ಚಲನವಲನದ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಸುನೀಲಕುಮಾರ ಅವರು, “ಚಿರತೆಯ ಬಗ್ಗೆ ನಿಗಾ ವಹಿಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಆದರೆ, ಕೇವಲ ನಿಗಾ ಇಟ್ಟರೆ ಸಾಲದು, ಕೂಡಲೇ ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಬೇಕೆಂದು ಜನರು ಆಗ್ರಹಿಸಿದ್ದಾರೆ.



