ಹೊಸದಿಗಂತ ರೋಣ:
ತಮ್ಮ ಮೇಲಿರುವ ಹಳೆಯ ಪ್ರಕರಣಗಳನ್ನು ಖುಲಾಸೆಗೊಳಿಸುವಂತೆ ಒತ್ತಾಯಿಸಿ, ಕರ್ತವ್ಯನಿಷ್ಠ ಅಧಿಕಾರಿಯೊಬ್ಬರ ಮೇಲೆ ಕೊಲೆ ಯತ್ನ ನಡೆಸಿರುವ ಘಟನೆ ರೋಣದಲ್ಲಿ ಸಂಭವಿಸಿದೆ. ರೋಣ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾದ ನಾಗರಾಜ ಕೆ. ಅವರ ಮೇಲೆ ಭಾನುವಾರ ತಡರಾತ್ರಿ ಈ ದಾಳಿ ನಡೆದಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಟ್ಟಣದ ಪಿಡಬ್ಲ್ಯುಡಿ ಪ್ರವಾಸಿ ಮಂದಿರದ ಆವರಣದಲ್ಲಿರುವ ತಹಶೀಲ್ದಾರ್ ನಿವಾಸಕ್ಕೆ ಭಾನುವಾರ ರಾತ್ರಿ ನುಗ್ಗಿದ ಆರೋಪಿಗಳಾದ ಹನ್ಮಂತ ಚಲವಾದಿ ಮತ್ತು ಶರಣಪ್ಪ ಗದಗಿನ, ನಾಗರಾಜ ಕೆ. ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ತಹಶೀಲ್ದಾರರ ಕತ್ತು ಹಿಸುಕಿ ಅವರನ್ನು ಕೊಲ್ಲಲು ಯತ್ನಿಸಿದ್ದಾರೆ. ಸಕಾಲದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಹನ್ಮಂತ ಚಲವಾದಿ ಮೇಲೆ ಈ ಹಿಂದೆಯೇ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದನ್ನು ರದ್ದುಪಡಿಸುವಂತೆ ಆತ ಪದೇ ಪದೇ ತಹಶೀಲ್ದಾರ್ ಕಚೇರಿಗೆ ತೆರಳಿ ಒತ್ತಡ ಹೇರುತ್ತಿದ್ದನು. “ನನ್ನ ಮೇಲಿರುವ ಕೇಸ್ ಖುಲಾಸೆಗೊಳಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ” ಎಂದು ಈ ಹಿಂದೆ ಸರ್ಕಾರಿ ಕರ್ತವ್ಯಕ್ಕೂ ಅಡ್ಡಿಪಡಿಸಿ ದಮ್ಕಿ ಹಾಕಿದ್ದ ಎನ್ನಲಾಗಿದೆ. ಆದರೆ, ಯಾವುದಕ್ಕೂ ಜಗ್ಗದ ನಾಗರಾಜ ಅವರು ಕಾನೂನುಬದ್ಧವಾಗಿ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿಗಳು ಈ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ.
ಈ ಘಟನೆಯು ರೋಣದ ಸರ್ಕಾರಿ ನೌಕರರಲ್ಲಿ ಭೀತಿ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದ್ಯ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



