ಹೊಸದಿಗಂತ ಗೋಕರ್ಣ:
ಕಡಲತೀರದ ಪರಿಸರ ವ್ಯವಸ್ಥೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುವ ಕಡಲಾಮೆಗಳ ಸಂರಕ್ಷಣಾ ಅಭಿಯಾನಕ್ಕೆ ಗಂಗೆಕೊಳ್ಳದಲ್ಲಿ ಮೊದಲ ಹಂತದ ಯಶಸ್ಸು ಸಿಕ್ಕಿದೆ. ಅರಣ್ಯ ಇಲಾಖೆಯ ಗಂಗೆಕೊಳ್ಳದ ಆಮೆ ಸಂರಕ್ಷಣಾ ಕೇಂದ್ರದಲ್ಲಿ, ಮೊಟ್ಟೆಯಿಂದ ಹೊರಬಂದ 103 ಕಡಲಾಮೆ ಮರಿಗಳನ್ನು ಮಂಗಳವಾರ ಸಮುದ್ರಕ್ಕೆ ಬಿಡಲಾಯಿತು.
ಪ್ರತಿ ವರ್ಷ ಡಿಸೆಂಬರ್ನಿಂದ ಮೇ ತಿಂಗಳವರೆಗೆ ಕಡಲಾಮೆಗಳ ಸಂತಾನೋತ್ಪತ್ತಿಯ ಕಾಲ. ಈ ಅವಧಿಯಲ್ಲಿ ಕಡಲತೀರದ ಮರಳಿನಲ್ಲಿ ಆಮೆಗಳು ಇಟ್ಟು ಹೋಗುವ ಮೊಟ್ಟೆಗಳನ್ನು ಅರಣ್ಯ ಇಲಾಖೆ ಗುರುತಿಸಿ, ಸಂರಕ್ಷಿಸುತ್ತದೆ.
ಈ ಬಾರಿ ಹೊನ್ನಾವರ ವಿಭಾಗದ ಡಿ.ಸಿ.ಎಫ್ ಯೋಗೇಶ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಎ.ಸಿ.ಎಫ್ ಕೃಷ್ಣ ಗೌಡ ಹಾಗೂ ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ ನೇತೃತ್ವದ ತಂಡವು ಸಾರ್ವಜನಿಕರ ಸಹಕಾರದೊಂದಿಗೆ ಒಟ್ಟು 24 ಗೂಡುಗಳನ್ನು ಪತ್ತೆಹಚ್ಚಿ, 1348 ಮೊಟ್ಟೆಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿತ್ತು.
ಸಂರಕ್ಷಿಸಲಾದ ಗೂಡುಗಳ ಪೈಕಿ ಮೊದಲ ಗೂಡಿನಿಂದ ಮಂಗಳವಾರ ಒಟ್ಟು 103 ಮರಿಗಳು ಹೊರಬಂದವು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಅತ್ಯಂತ ಜಾಗರೂಕತೆಯಿಂದ ಈ ಪುಟ್ಟ ಅತಿಥಿಗಳನ್ನು ಸಾಗರದ ಅಲೆಗಳಿಗೆ ಸೇರಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಎ.ಸಿ.ಎಫ್ ಬಸಮ್ಮ, ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಬಾಕಿ ಇರುವ ಮೊಟ್ಟೆಗಳಿಂದಲೂ ಮುಂದಿನ ದಿನಗಳಲ್ಲಿ ಮರಿಗಳು ಹೊರಬರಲಿದ್ದು, ಅವುಗಳನ್ನೂ ಸಹ ಸುರಕ್ಷಿತವಾಗಿ ಕಡಲಿಗೆ ಬಿಡಲಾಗುವುದು ಎಂದು ಇಲಾಖೆ ತಿಳಿಸಿದೆ.



