ಹೊಸದಿಗಂತ ವರದಿ ದಾಂಡೇಲಿ :
ಕಾಳಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಸಂರಕ್ಷಣೆಗಾಗಿ ಮತ್ತು ಪರಿಸರ ಹಾಗೂ ವನ್ಯಜೀವಿಗಳ ರಕ್ಷಣೆಯ ದೃಷ್ಟಿಯಿಂದ ಮತ್ತು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎರಡು ಬೆಲ್ಜಿಯನ್ ಮಾಲಿನೋಯಿಸ್ ನಾಯಿಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.
ಮರ ಮುಟ್ಟುಗಳ ಹಾಗೂ ವನ್ಯ ಪ್ರಾಣಿಗಳ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಲ್ಜಿಯನ್ ಮಾಲಿನೋಯಿಸ್ ನಾಯಿಗಳ ಸೇರ್ಪಡೆ ಪರಿಣಾಮಕಾರಿಯಾಗಿದೆ.
ಬಂಡಿಪುರದ ಕರ್ನಾಟಕ ಶ್ವಾನದಳ ತರಬೇತಿ ಕೇಂದ್ರದಲ್ಲಿ ಡಾ.ಅಮೃತ್ ಎಸ್ ಹೀರಣ್ಯ ಅವರಿಂದ ಕಳೆದ ಒಂದು ವರ್ಷಗಳವರೆಗೆ ಸುಧೀರ್ಘ ತರಬೇತಿಯನ್ನು ಪಡೆದ ನಾಯಿಗಳು ಇದಾಗಿರುತ್ತದೆ. ಡಾ.ಅಮೃತ್ ಎಸ್.ಹೀರಣ್ಯ ಅವರು ನ್ಯೂಜಿಲೆಂಡ್ ನಲ್ಲಿ ತರಬೇತಿಯನ್ನು ಪಡೆದ ಭಾರತದ ಏಕೈಕ ಶ್ವಾನದಳ ಮನೋವೈದ್ಯ ತಜ್ಞರಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಕಳೆದ ಒಂದು ವರ್ಷಗಳಿಂದ ಈ ನಾಯಿಗಳಿಗೆ ತರಬೇತಿಯನ್ನು ನೀಡುವುದರ ಜೊತೆಗೆ ಉಪ ವಲಯರಣ್ಯಾಧಿಕಾರಿ ಅಮಿನ್ ಸಾಬ್ ಸೋಲಾಪುರ ಹಾಗೂ ಅರಣ್ಯ ವೀಕ್ಷಕರಾದ ಬೊಮ್ಮು ಗಾವಡೆ ಮತ್ತು ದೊಂಡು ಕರಾತ್ ಅವರು ಸಹ ಈ ನಾಯಿಗಳ ನಿರ್ವಹಣೆ ಮತ್ತು ಯೋಗಕ್ಷೇಮದ ಕುರಿತಂತೆ ಡಾ.ಅಮೃತ್ ಎಸ್.ಹೀರಣ್ಯ ಅವರಿಂದ ಸಮಗ್ರವಾದ ತರಬೇತಿಯನ್ನು ಪಡೆದುಕೊಂಡಿದ್ದಾರೆ.
ದಿನಾಂಕ : 03.12.2025 ರಂದು ಎರಡು ಶ್ವಾನಗಳನ್ನು ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಧೀನಕ್ಕೆ ನೀಡಲಾಯಿತು. 15 ತಿಂಗಳ ವಯಸ್ಸಿನ ಈ ನಾಯಿಗಳಿಗೆ ಅವನಿ ಮತ್ತು ತಾರಾ ಎಂದು ಹೆಸರಿಡಲಾಗಿದ್ದು, ಇದರ ಉಸ್ತುವಾರಿಯನ್ನು ಉಪ ವಲಯ ಅರಣ್ಯಾಧಿಕಾರಿ ಅಮಿನ್ ಸಾಬ್ ಸೋಲಾಪುರ್ ಅವರು ವಹಿಸಿಕೊಂಡಿದ್ದಾರೆ. ಎರಡು ನಾಯಿಗಳ ನಿರ್ವಹಣೆಯನ್ನು ಅರಣ್ಯ ವೀಕ್ಷಕರಾದ ಬೊಮ್ಮು ಗಾವಡೆ ಮತ್ತು ದೊಂಡು ಕರಾತ್ ಅವರು ನಿರ್ವಹಣೆ ಮಾಡುತ್ತಿದ್ದಾರೆ.
ಬೆಲ್ಜಿಯನ್ ಮಾಲಿನೋಯಿಸ್ ಅತ್ಯಂತ ಆತ್ಮವಿಶ್ವಾಸ, ಬುದ್ಧಿವಂತ ಮತ್ತು ಕಷ್ಟಪಟ್ಟು ದುಡಿಯುವ ನಾಯಿ ತಳಿಗಳಲ್ಲಿ ಒಂದಾಗಿದೆ. ವನ್ಯಜೀವಿ ಇಲಾಖೆಯ ವ್ಯಾಪ್ತಿಯಲ್ಲಿ ಯಾವುದೇ ಅಪರಾಧ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಈ ಎರಡು ನಾಯಿಗಳು ವಿಶಿಷ್ಟ ರೀತಿಯ ಸೇವೆಯನ್ನು ನೀಡಲಿದೆ.



