Tuesday, January 27, 2026
Tuesday, January 27, 2026
spot_img

ನಾಳೆಯಿಂದ ಸಂಸತ್ ಬಜೆಟ್ ಅಧಿವೇಶನ: ಸುಗಮ ಕಲಾಪಕ್ಕೆ ಸಹಕರಿಸಲು ಸರ್ವಪಕ್ಷಗಳಿಗೆ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನ ಬಜೆಟ್ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. ಈ ಸಂಬಂಧ ಇಂದು ಕೇಂದ್ರ ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳು – ಲೋಕಸಭೆ ಮತ್ತು ರಾಜ್ಯಸಭೆ – ಎರಡೂ ಸದನಗಳನ್ನು ಸುಗಮವಾಗಿ ನಡೆಸಲು ಸಹಕರಿಸುವಂತೆ ಮನವಿ ಮಾಡಿದೆ.

ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಲಾಗುವುದು. ಅದರ ನಂತರ ಸಂಸತ್ತಿನ ಎರಡೂ ಸದನಗಳಲ್ಲಿ ಬಜೆಟ್ ಕುರಿತು ಚರ್ಚೆ ನಡೆಯಲಿದೆ. ಅಧಿವೇಶನವನ್ನು ಸುಗಮವಾಗಿ ನಡೆಸಲು ಎಲ್ಲಾ ಪಕ್ಷಗಳು ಸಹಕರಿಸಬೇಕೆಂದು ನಾವು ವಿನಂತಿಸಿದ್ದೇವೆ ಎಂದು ತಿಳಿಸಿದರು.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸರ್ವಪಕ್ಷಗಳ ಸಭೆಯ ನೇತೃತ್ವ ವಹಿಸಿದ್ದರು . ರಾಜ್ಯಸಭಾ ಆಡಳಿತ ಪಕ್ಷದ ನಾಯಕ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಎಲ್. ಮುರುಗನ್ ಕೂಡ ಸಭೆಯಲ್ಲಿ ಹಾಜರಿದ್ದರು. ವಿವಿಧ ಪಕ್ಷಗಳ ನಾಯಕರು ನೀಡಿದ ಸಲಹೆಗಳನ್ನು ನಾವು ಗಮನಿಸಿದ್ದೇವೆ. ಇದು ಬಜೆಟ್ ಅಧಿವೇಶನ ಮತ್ತು ಈ ವರ್ಷದ ಮೊದಲ ಸಂಸತ್ ಅಧಿವೇಶನವಾಗಿರುವುದರಿಂದ ಸದನವನ್ನು ನಡೆಸಲು ಸಹಕಾರ ನೀಡುವಂತೆ ನಾವು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದೇವೆ ಎಂದು ರಿಜಿಜು ಹೇಳಿದರು.

ಜನವರಿ 29 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು ಮತ್ತು ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

VB-G RAM G ವಾಪಸ್​ ಪಡೆಯುವುದಿಲ್ಲ:
ಈ ನಡುವೆ MGNREGA ಹೆಸರನ್ನು ಬದಲಿಸಿ ಹೊಸದಾಗಿ ಪರಿಚಯಿಸಲಾದ VB-G RAM G ಕಾನೂನನ್ನು ಸರ್ಕಾರ ಹಿಂತೆಗೆದುಕೊಳ್ಳುವುದಿಲ್ಲ ಎಂದು ರಿಜಿಜು ಇದೇ ವೇಳೆ ಸ್ಪಷ್ಟಪಡಿಸಿದರು. ಒಮ್ಮೆ ಕಾನೂನನ್ನು ರಾಷ್ಟ್ರದ ಮುಂದೆ ಇರಿಸಿದ ನಂತರ, ನಾವು ಅದನ್ನು ಹಿಮ್ಮುಖಗೊಳಿಸಲು ಎಂದು ಅವರು ರಿಜಿಜು ಸ್ಪಷ್ಟಪಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !