Wednesday, January 28, 2026
Wednesday, January 28, 2026
spot_img

ಧಗಧಗನೆ ಹೊತ್ತಿ ಉರಿದ ಸ್ಲೀಪರ್ ಬಸ್: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭೀಕರ ದುರಂತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸನಗರ ತಾಲೂಕಿನ ಅರಸಾಳು ಸಮೀಪ ತಡರಾತ್ರಿ ಖಾಸಗಿ ಸ್ಲೀಪರ್ ಬಸ್ಸೊಂದು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾದ ಭೀಕರ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಎಲ್ಲಾ 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅನ್ನಪೂರ್ಣೇಶ್ವರಿ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ಹೊಸನಗರದ ನಿಟ್ಟೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿತ್ತು. ಅರಸಾಳು ಮತ್ತು ಸೂಡೂರು ಗೇಟ್ ನಡುವೆ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎಂಜಿನ್ ಭಾಗದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದ್ದು, ಬಸ್ ಧಗಧಗನೆ ಉರಿಯಲಾರಂಭಿಸಿದೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ, ವಾಹನವನ್ನು ತಕ್ಷಣ ರಸ್ತೆಯ ಬಲಭಾಗಕ್ಕೆ ತಿರುಗಿಸಿದ್ದಾರೆ. ಈ ವೇಳೆ ಬಸ್ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಸಮಯವನ್ನು ಬಳಸಿಕೊಂಡ ಪ್ರಯಾಣಿಕರು ತುರ್ತು ನಿರ್ಗಮನ ದ್ವಾರ, ಕಿಟಕಿ ಹಾಗೂ ಮುಖ್ಯ ಬಾಗಿಲಿನ ಮೂಲಕ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಬಸ್ಸಿನಿಂದ ಇಳಿಯುವ ಅವಸರದಲ್ಲಿ ಹಾಗೂ ಬೆಂಕಿಯ ತಾಪಕ್ಕೆ ಸಿಲುಕಿ ಚಾಲಕ, ಕ್ಲೀನರ್ ಮತ್ತು 5-6 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಇಡೀ ಬಸ್ ಸುಟ್ಟು ಕರಕಲಾಗಿದ್ದು, ಪ್ರಯಾಣಿಕರು ಬಟ್ಟೆಬರೆ ಹಾಗೂ ಲಗೇಜುಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !