ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಆರಂಭಕ್ಕೆ ಇನ್ನು ಕೇವಲ ಎರಡು ತಿಂಗಳು ಬಾಕಿ ಇರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಮೈದಾನದ ಬಗ್ಗೆ ಇನ್ನೂ ಅಧಿಕೃತ ಮುದ್ರೆ ಒತ್ತಿರಲಿಲ್ಲ. ಇದು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿತ್ತು. ಆದರೆ, ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲೇ ಪಂದ್ಯಗಳನ್ನು ಆಯೋಜಿಸಲು ಆರ್‌ಸಿಬಿ ಆಡಳಿತ ಮಂಡಳಿ ಪೂರಕ ಹೆಜ್ಜೆ ಇಟ್ಟಿದೆ.
ಕೆಎಸ್‌ಸಿಎ ಈ ಹಿಂದೆಯೇ “ನಿರ್ಧಾರ ಮ್ಯಾನೇಜ್‌ಮೆಂಟ್ ಕೈಯಲ್ಲಿದೆ” ಎಂದು ಹೇಳಿ ಜವಾಬ್ದಾರಿಯಿಂದ ಹಿಂದೆ ಸರಿದಿತ್ತು. ಇತ್ತ ಬಿಸಿಸಿಐ ನೀಡಿದ್ದ ಡೆಡ್‌ಲೈನ್ ಕೂಡ ಮುಗಿದಿದೆ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಮಯ ವಿಸ್ತರಣೆಗೆ ಮನವಿ ಮಾಡಿದ್ದು, ನೇರವಾಗಿ ರಾಜ್ಯ ಸರ್ಕಾರದ ಜೊತೆ ಚರ್ಚೆಗೆ ಇಳಿದಿದೆ. ಕಳೆದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಭದ್ರತೆ ಮತ್ತು ಆಯೋಜನೆಯ ಬಗ್ಗೆ ಇಂದು ಅಥವಾ ನಾಳೆ ಸರ್ಕಾರದೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ.
ತಮ್ಮ ನೆಚ್ಚಿನ ತಂಡವನ್ನು ತವರು ನೆಲದಲ್ಲೇ ನೋಡಬೇಕು ಎನ್ನುವ ಅಭಿಮಾನಿಗಳ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಈ ಭಾವನೆಗೆ ಬೆಲೆ ನೀಡಿರುವ ಮ್ಯಾನೇಜ್‌ಮೆಂಟ್, ಹೇಗಾದರೂ ಮಾಡಿ ಬೆಂಗಳೂರಿನಲ್ಲೇ ಪಂದ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಸರ್ಕಾರದ ಜೊತೆಗಿನ ಮಾತುಕತೆ ಯಶಸ್ವಿಯಾದರೆ, ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಕೆಂಪು ಸಾಗರವಾಗಿ ಮಾರ್ಪಡುವುದರಲ್ಲಿ ಸಂಶಯವಿಲ್ಲ.



