ಹೊಸದಿಗಂತ ಡಿಜಿಟಲ್ ಡೆಸ್ಕ್:
ವುಮೆನ್ಸ್ ಪ್ರೀಮಿಯರ್ ಲೀಗ್‌ನ 17ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಅಸಾಧ್ಯವೆನ್ನುವಂತಹ ಗೆಲುವನ್ನು ತನ್ನದಾಗಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೋಫಿ ಡಿವೈನ್ ಅವರ ಬೌಲಿಂಗ್ ಪ್ರದರ್ಶನ ಇತಿಹಾಸದ ಪುಟ ಸೇರಿದೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 18 ಓವರ್‌ಗಳಲ್ಲಿ 146 ರನ್ ಗಳಿಸಿತ್ತು. 19ನೇ ಓವರ್‌ನಲ್ಲಿ ಸ್ನೇಹ್ ರಾಣಾ ಮತ್ತು ನಿಕ್ಕಿ ಪ್ರಸಾದ್ ಸ್ಫೋಟಕ ಬ್ಯಾಟಿಂಗ್ ನಡೆಸಿ 20 ರನ್ ಚಚ್ಚಿದರು.
ಕೊನೆಯ ಓವರ್‌ನಲ್ಲಿ ಡೆಲ್ಲಿಯ ಗೆಲುವಿಗೆ ಕೇವಲ 9 ರನ್ ಬೇಕಿತ್ತು. ನಾಯಕಿ ಆ್ಯಶ್ಲಿ ಗಾರ್ಡ್ನರ್ ಈ ನಿರ್ಣಾಯಕ ಓವರ್ ಅನ್ನು ಅನುಭವಿ ಸೋಫಿ ಡಿವೈನ್ ಕೈಗೆ ಒಪ್ಪಿಸಿದರು. ಒತ್ತಡದ ನಡುವೆಯೂ ಅದ್ಭುತ ಬೌಲಿಂಗ್ ಮಾಡಿದ ಸೋಫಿ, ಕೇವಲ 5 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆಯುವ ಮೂಲಕ ಗುಜರಾತ್ ತಂಡಕ್ಕೆ 3 ರನ್ಗಳ ಸ್ಮರಣೀಯ ಗೆಲುವು ತಂದುಕೊಟ್ಟರು.
ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೊನೆಯ ಓವರ್‌ನಲ್ಲಿ 10ಕ್ಕಿಂತ ಕಡಿಮೆ ರನ್‌ಗಳನ್ನು ಎರಡು ಬಾರಿ ಯಶಸ್ವಿಯಾಗಿ ಡಿಫೆಂಡ್ ಮಾಡಿದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಸೋಫಿ ಡಿವೈನ್ ಪಾತ್ರರಾಗಿದ್ದಾರೆ. ಈ ಹಿಂದೆ ಡೆಲ್ಲಿ ವಿರುದ್ಧವೇ ನಡೆದಿದ್ದ ಮತ್ತೊಂದು ಪಂದ್ಯದಲ್ಲಿ ಅವರು ಕೊನೆಯ ಓವರ್‌ನಲ್ಲಿ ಕೇವಲ 2 ರನ್ ನೀಡಿ 4 ರನ್ಗಳ ಜಯ ತಂದುಕೊಟ್ಟರು.



