ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ವರುಣ್ ಧವನ್ ಅಭಿನಯದ ‘ಬಾರ್ಡರ್ 2’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದರೆ, ಸದ್ಯ ವರುಣ್ ಸುದ್ದಿಯಲ್ಲಿರುವುದು ಸಿನಿಮಾದ ಯಶಸ್ಸಿಗಾಗಿ ಅಲ್ಲ, ಬದಲಾಗಿ ಮುಂಬೈ ಮೆಟ್ರೋದಲ್ಲಿ ಅವರು ಮಾಡಿದ ಒಂದು ‘ಸಾಹಸ’ಕ್ಕಾಗಿ!
ಶನಿವಾರದಂದು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವರುಣ್ ಧವನ್, ಪ್ರಯಾಣಿಕರ ಸುರಕ್ಷತೆಗಾಗಿ ಇರುವ ಹ್ಯಾಂಡಲ್‌ಗಳನ್ನು ಹಿಡಿದು ಪುಲ್-ಅಪ್ಸ್ ಮಾಡಲು ಯತ್ನಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳನ್ನು ಮೆಚ್ಚಿಸಲು ಹೋದ ನಟ, ಮೆಟ್ರೋ ನಿಯಮಗಳನ್ನು ಗಾಳಿಗೆ ತೂರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಈ ವಿಡಿಯೋ ಗಮನಿಸಿದ ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್, ನಟನಿಗೆ ನೇರವಾಗಿಯೇ ಕಿವಿಮಾತು ಹೇಳಿದೆ. “ವರುಣ್ ಧವನ್ ಅವರೇ, ಮೆಟ್ರೋದಲ್ಲಿ ಇಂತಹ ಸ್ಟಂಟ್ ಮಾಡಬೇಡಿ. ಹ್ಯಾಂಡಲ್‌ಗಳು ಇರುವುದು ಪ್ರಯಾಣಿಕರ ಸಮತೋಲನಕ್ಕಾಗಿ ಹೊರತು ವ್ಯಾಯಾಮಕ್ಕಲ್ಲ. ಇದು ಅಪಾಯಕಾರಿ ಹಾಗೂ ಇತರರಿಗೂ ತೊಂದರೆ ನೀಡುವ ಕೃತ್ಯ,” ಎಂದು ಎಚ್ಚರಿಸಿದೆ.
ಕೇವಲ ಎಚ್ಚರಿಕೆಯಷ್ಟೇ ಅಲ್ಲದೆ, ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಯಮ ಉಲ್ಲಂಘನೆಗಾಗಿ ನಟನಿಗೆ 500 ರೂಪಾಯಿ ದಂಡ ವಿಧಿಸಿದೆ. ಸೆಲೆಬ್ರಿಟಿಗಳೇ ಇಂತಹ ಕೆಲಸ ಮಾಡಿದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ನೆಟ್ಟಿಗರು ವರುಣ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.



