ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕಾರಣದ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇಂದು ಬೆಳಿಗ್ಗೆ ನಡೆದ ಭೀಕರ ವಿಮಾನ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಸಂಭವಿಸಿದ ಈ ದುರಂತದಲ್ಲಿ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರೂ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ.
ದುರಂತ ನಡೆದಿದ್ದು ಹೇಗೆ?
ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ಮೊದಲ ಬಾರಿ ರನ್‌ವೇ ಮೇಲೆ ಇಳಿಯಲು ಪ್ರಯತ್ನಿಸಿದಾಗ ತಾಂತ್ರಿಕ ಅಡಚಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ. ತಕ್ಷಣ ಪೈಲಟ್‌ಗಳು ವಿಮಾನವನ್ನು ಮತ್ತೆ ಮೇಲೆ ಹಾರಿಸಿ ಎರಡನೇ ಬಾರಿ ಇಳಿಸಲು ಪ್ರಯತ್ನಿಸಿದರು. ಆದರೆ, ಈ ಹಂತದಲ್ಲಿ ವಿಮಾನವು ಹಠಾತ್ತಾಗಿ ನಿಯಂತ್ರಣ ಕಳೆದುಕೊಂಡು ರನ್‌ವೇ ಆರಂಭದಲ್ಲೇ ವೇಗವಾಗಿ ಅಪ್ಪಳಿಸಿದೆ. ಅಪ್ಪಳಿಸಿದ ಬೆನ್ನಲ್ಲೇ ವಿಮಾನ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದ್ದರಿಂದ ವಿಮಾನದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿವೆ.
ಈ ಅಪಘಾತದಲ್ಲಿ ಅಜಿತ್ ಪವಾರ್, ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್, ಒಬ್ಬ ಪಿಎಸ್‌ಒ ಹಾಗೂ ಒಬ್ಬ ಅಟೆಂಡೆಂಟ್ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ಪವಾರ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಾರಾಮತಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ತಾಂತ್ರಿಕ ಕಾರಣಗಳ ಶಂಕೆ:
ಆ ಸಮಯದಲ್ಲಿ ಹವಾಮಾನವು ಸಾಮಾನ್ಯವಾಗಿತ್ತು ಎಂದು ತಿಳಿದುಬಂದಿದೆ. ಹೀಗಾಗಿ, ಇಂಜಿನ್ ವಿಫಲತೆ ಅಥವಾ ತಾಂತ್ರಿಕ ದೋಷವೇ ಅಪಘಾತಕ್ಕೆ ಪ್ರಮುಖ ಕಾರಣವಿರಬಹುದು ಎಂದು ವಾಯುಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ಲ್ಯಾಂಡಿಂಗ್ ವಿಫಲವಾದಾಗ ಪೈಲಟ್‌ಗಳ ಮೇಲೆ ಸಹಜವಾಗಿಯೇ ಒತ್ತಡ ಹೆಚ್ಚುತ್ತದೆ, ಇದು ಸಣ್ಣ ದೋಷವನ್ನೂ ದೊಡ್ಡ ಅನಾಹುತಕ್ಕೆ ದೂಡಬಹುದು” ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಘಟನಾ ಸ್ಥಳದಲ್ಲಿ ವಿಮಾನದ ‘ಬ್ಲಾಕ್ ಬಾಕ್ಸ್’ (CVR ಮತ್ತು FDR) ಪತ್ತೆಯಾಗಿದ್ದು, ಇದನ್ನು ತನಿಖೆಗೆ ಒಳಪಡಿಸಲಾಗಿದೆ. ಕೇಂದ್ರ ವಾಯುಯಾನ ಸಚಿವಾಲಯವು AAIB ಮೂಲಕ ಸಮಗ್ರ ತನಿಖೆಗೆ ಆದೇಶ ನೀಡಿದೆ. ಪೈಲಟ್ ಮತ್ತು ಎಟಿಸಿ ನಡುವಿನ ಕೊನೆಯ ಸಂಭಾಷಣೆಯು ಅಪಘಾತದ ನಿಗೂಢತೆಯನ್ನು ಭೇದಿಸಲು ನೆರವಾಗಲಿದೆ. ವಿಮಾನದ ಮಾಲೀಕತ್ವ ಹೊಂದಿದ್ದ VSR ಏವಿಯೇಷನ್, ತನ್ನ ವಿಮಾನವು ಸುಸ್ಥಿತಿಯಲ್ಲಿತ್ತು ಎಂದು ಹೇಳಿಕೊಂಡಿದೆಯಾದರೂ, ತಾಂತ್ರಿಕ ತನಿಖೆಯ ಬಳಿಕವಷ್ಟೇ ಸತ್ಯಾಂಶ ಹೊರಬರಬೇಕಿದೆ.



