ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತವು ಈ ಒಪ್ಪಂದದ ಮೂಲಕ ಹೆಚ್ಚಿನ ಲಾಭ ಪಡೆದುಕೊಂಡಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಯೂರೋಪಿಯನ್ ಒಕ್ಕೂಟದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವು ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆ. ಇದರಿಂದ ಭಾರತಕ್ಕೆ ಹೆಚ್ಚಿನ ಮಾರುಕಟ್ಟೆ ಪ್ರವೇಶ ಮತ್ತು ವಲಸೆಗೆ ಹೆಚ್ಚಿನ ಅವಕಾಶಗಳು ದೊರೆತಿವೆ ಎಂದು ಗ್ರೀರ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕವು ತನ್ನ ದೇಶೀಯ ಉತ್ಪಾದನೆಗೆ ಒತ್ತು ನೀಡುತ್ತಿರುವುದರಿಂದ ಮತ್ತು ಕಟ್ಟುನಿಟ್ಟಿನ ಟ್ಯಾರಿಫ್ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ, ಇತರ ದೇಶಗಳು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುವಂತಾಗಿದೆ. ಭಾರತ-EU ಒಪ್ಪಂದವು ಈ ಬೆಳವಣಿಗೆಯ ಒಂದು ಭಾಗ ಎಂದು ಅವರು ಬಣ್ಣಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಕಾರಣಕ್ಕಾಗಿ ಅಮೆರಿಕವು ಭಾರತದ ಮೇಲೆ ಒಟ್ಟು ಶೇ. 50 ರಷ್ಟು ಟ್ಯಾರಿಫ್ ವಿಧಿಸುತ್ತಿದೆ. ಇತ್ತೀಚೆಗೆ ಭಾರತೀಯ ಕಂಪನಿಗಳು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಿವೆ.
ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಟ್ಯಾರಿಫ್ ಇಳಿಕೆಯ ಸುಳಿವು ನೀಡಿದ್ದರೂ, ಜೇಮೀಸನ್ ಗ್ರೀರ್ ಮಾತ್ರ ಕಠಿಣ ನಿಲುವು ತಳೆದಿದ್ದಾರೆ. ತೈಲ ಖರೀದಿ ಪ್ರಮಾಣ ತಗ್ಗಿಸಿದರೂ ಟ್ಯಾರಿಫ್ ಕ್ರಮ ಸದ್ಯಕ್ಕೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



