Wednesday, January 28, 2026
Wednesday, January 28, 2026
spot_img

ವೈದ್ಯರ ಕಿರುಕುಳಕ್ಕೆ ಬೇಸತ್ತು ಡಿ ಗ್ರೂಪ್ ನೌಕರನ ಆತ್ಮಹ*ತ್ಯೆ ಯತ್ನ!

ಹೊಸದಿಗಂತ ಹಾವೇರಿ:

ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಂದ ಸತತ ಮಾನಸಿಕ ಕಿರುಕುಳ ಮತ್ತು ಅವಾಚ್ಯ ಶಬ್ದಗಳ ನಿಂದನೆ ನಡೆದಿದೆ ಎಂದು ಆರೋಪಿಸಿ, ಆಸ್ಪತ್ರೆಯ ‘ಡಿ’ ಗ್ರೂಪ್ ನೌಕರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಿದ್ದಪ್ಪ ರೆಡ್ಡಿ ಎಂಬುವವರು ಕಳೆದ 12 ವರ್ಷಗಳಿಂದ ಇಲ್ಲಿ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಆತ್ಮಹತ್ಯೆಗೂ ಮುನ್ನ ಸಿದ್ದಪ್ಪ ಬರೆದಿದ್ದಾರೆನ್ನಲಾದ ಡೆತ್‌ನೋಟ್‌ನಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರು ಮತ್ತು ಡಾ. ಸುರೇಶ್ ಗಡ್ಡಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ಕೆಲಸದ ಅವಧಿಯಲ್ಲಿ ರೋಗಿಗಳನ್ನು ಕರೆತರುವ ವಿಚಾರವಾಗಿ ಡಾ. ಸುರೇಶ್ ಅವರು ಸಿದ್ದಪ್ಪ ಅವರನ್ನು ಅಕಾರಣವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಶಸ್ತ್ರಚಿಕಿತ್ಸಕರನ್ನು ಸ್ಥಳಕ್ಕೆ ಕರೆಸಿ, ಕೊಠಡಿಯ ಬಾಗಿಲು ಹಾಕಿ ಎಲ್ಲರೂ ಸೇರಿ ತನ್ನನ್ನು ಅವಮಾನಿಸಿದ್ದಾರೆ ಎಂದು ಸಿದ್ದಪ್ಪ ಆರೋಪಿಸಿದ್ದಾರೆ.

“ನನ್ನ ವ್ಯಾಪ್ತಿಗೆ ಬರದ ಕೆಲಸಗಳನ್ನು ಮಾಡುವಂತೆ ಒತ್ತಾಯಿಸಿ, ಎಲ್ಲರ ಮುಂದೆ ಅವಾಚ್ಯವಾಗಿ ಬೈಯುತ್ತಿದ್ದರು. ಕಳೆದ ಎಂಟು ದಿನಗಳಿಂದ ನಿದ್ದೆಯಿಲ್ಲದೆ ಮಾನಸಿಕವಾಗಿ ನೊಂದಿದ್ದೇನೆ” ಎಂದು ಸಂತ್ರಸ್ತ ನೌಕರ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನನಗೆ ನ್ಯಾಯ ಸಿಗಬೇಕು ಮತ್ತು ಕಿರುಕುಳ ನೀಡಿದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಿದ್ದಪ್ಪ ರೆಡ್ಡಿ ಒತ್ತಾಯಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳ ಮುಂದಿನ ನಡೆಯತ್ತ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !