ಹೊಸದಿಗಂತ ಡಿಜಿಟಲ್ ಡೆಸ್ಕ್:
6 ವರ್ಷದ ಬಾಲಕಿಯನ್ನು ಆಕೆಯ ಮೃತ ಸೋದರನ ಅಪ್ರಾಪ್ತ ಸ್ನೇಹಿತರೇ ಬರ್ಬರವಾಗಿ ಅತ್ಯಾಚಾರವೆಸಗಿದಂತಹ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಜನವರಿ 18 ರಂದು ಈ ಪೈಶಾಚಿಕ ಕೃತ್ಯ ನಡೆದಿದೆ.
ಈಶಾನ್ಯ ದೆಹಲಿಯ ಭಜನ್‌ಪುರದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂವರು ಹುಡುಗರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆಘಾತಕಾರಿ ವಿಚಾರ ಎಂದರೆ ಆರೋಪಿಗಳೆಲ್ಲರೂ 10, 13 ಹಾಗೂ 14 ವರ್ಷದೊಳಗಿನವರಾಗಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಹಾಗೂ ಆತನ ಕುಟುಂಬ ಪರಾರಿಯಾಗಿದೆ.
ಅತ್ಯಾ*ಚಾರಕ್ಕೊಳಗಾದ ಆರು ವರ್ಷದ ಬಾಲಕಿ ತನ್ನ ಪೋಷಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದು, ಆಕೆಯ ಸ್ಥಿತಿ ಸುಧಾರಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಜನವರಿ 18ರಂದು ಸಂಜೆ 7 ಗಂಟೆ ಸುಮಾರಿಗೆ ಬಾಲಕಿ ತೀವ್ರ ರಕ್ತಸ್ರಾವದೊಂದಿಗೆ ಮನೆಗೆ ಬಂದಿದ್ದಾಳೆ. ಆರಂಭದಲ್ಲಿ ಕೇಳಿದಾಗ ಆಕೆ ತಾನು ಬಿದ್ದಿದ್ದರಿಂದ ರಕ್ತಸ್ರಾವ ಆಗಿದ್ದಾಗಿ ಹೇಳಿದ್ದಾಳೆ. ಆದರೆ ಮನೆಗೆ ಬಂದ ಆಕೆಗೆ ಪ್ರಜ್ಞೆ ತಪ್ಪಿದೆ. ನಂತರ ನಾನು ಆಕೆಯ ಮುಖದ ಮೇಲೆ ನೀರು ಹಾಕಿ ಆಕೆಯನ್ನು ಎಚ್ಚರಗೊಳಿಸಿ ಏನಾಯಿತು ಎಂದು ಕೇಳಿದಾಗ ಆಕೆ ಆಗಲೂ ತನ್ನ ಬಿದ್ದಿದ್ದಾಗಿ ಹೇಳಿದ್ದಾಳೆ. ನಂತರ ನಮ್ಮ ಪಕ್ಕದ ಮನೆಯ ನೆರೆಮನೆಯ 13 ವರ್ಷದ ಹುಡುಗ ಕೂಡ ಅದೇ ಕಥೆ ಹೇಳಿದ್ದಾನೆ.
ಆದರೆ ಕುಟುಂಬದವರು ಪದೇ ಪದೇ ವಿಚಾರಿಸಿ ಪ್ರಶ್ನಿಸಿದಾಗ ಮಗು ಬಾಯ್ಬಿಟ್ಟಿದ್ದು, 13 ವರ್ಷದ ನೆರೆಮನೆಯ ಹುಡುಗ ಮತ್ತು ಕುಟುಂಬಕ್ಕೆ ಪರಿಚಿತರಾಗಿರುವ ಇತರ ಇಬ್ಬರು ಹುಡುಗರು ತನ್ನನ್ನು ಆಹಾರದ ನೀಡುವುದಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ನನ್ನ ಪತಿ ಚಾಕೋಲೇಟ್ ಖರೀದಿಸಿ ಆಕೆಗೆ ನೀಡಿ ನಮ್ಮ ಲೇನ್‌ನ ಪ್ರವೇಶದ್ವಾರದಲ್ಲಿ ಅವಳನ್ನು ಬಿಟ್ಟು ಹೋಗಿದ್ದರು. ಅಲ್ಲಿ ಹುಡುಗರು ಅವಳನ್ನು ಹಿಡಿದು ಚೌಮಿನ್ ನೀಡುವುದಾಗಿ ಆಕೆಗೆ ಆಸೆ ತೋರಿಸಿ ಅಲ್ಲಿಂದ ಆಕೆಯನ್ನು ಹತ್ತಿರದ ಖಾಲಿ ಇರುವ ಎರಡು ಅಂತಸ್ತಿನ ಕಟ್ಟಡಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅವಳ ಕೈಗಳನ್ನು ಹಾಗೂ ಬಾಯಿಯನ್ನು ಕಟ್ಟಿ ಆಕೆಯ ಮೇಲೆ ಕೃತ್ಯವೆಸಗಿದ್ದಾರೆ ಎಂದು ಮಗುವಿನ ತಾಯಿ ಹೇಳಿದ್ದಾರೆ.



