ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಇಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಖಾಸಗಿ ವಿಮಾನವು ಪುಣೆಯ ಬಾರಾಮತಿ ಪ್ರದೇಶದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ.
ಈ ವಿಮಾನ ದುರಂತ ಹಿಂದಿನ ದುರಂತಗಳ ಕಹಿ ನೆನಪು ಮರುಕಳಿಸುವಂತೆ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಇಂದಿರಾ ಗಾಂಧಿ ಪುತ್ರ ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ಮಾಜಿ ಲೋಕಸಭಾ ಸ್ಪೀಕರ್ ಜಿ.ಎಂ.ಸಿ. ಬಾಲಯೋಗಿ, ಎಸ್. ಮೋಹನ್ ಕುಮಾರಮಂಗಲಂ ಮತ್ತು ರಕ್ಷಣಾ ಖಾತೆಯ ಮಾಜಿ ರಾಜ್ಯ ಸಚಿವ ಎನ್.ವಿ. ಸೋಮು ಸೇರಿದಂತೆ ವಿಮಾನ ಅಪಘಾತಗಳಲ್ಲಿ ಸಾವಿಗೀಡಾದ ಪ್ರಮುಖ ರಾಜಕಾರಣಿಗಳ ನೆನಪು ಮರುಕಳಿಸಿದೆ.
ಸುಭಾಷ್ ಚಂದ್ರ ಬೋಸ್:
1945ರ ಆಗಸ್ಟ್ 18ರಂದು ತೈವಾನ್ನಲ್ಲಿ ನಡೆದ ವಿಮಾನ ದುರಂತದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟರು ಎಂದು ಹೇಳಲಾಗಿದೆ. ದೇಶದ ಇತಿಹಾಸದಲ್ಲಿ ರಾಜಕಾರಣಿಯೊಬ್ಬರು ವಾಯು ಸಂಚಾರದ ವೇಳೆ ಪ್ರಾಣ ಕಳೆದುಕೊಂಡ ಮೊದಲ ಘಟನೆ ಎಂದು ಪರಿಗಣಿಸಲಾಗಿದೆ.
ಸಂಜಯ್ ಗಾಂಧಿ:
ಕಾಂಗ್ರೆಸ್ ನಾಯಕ ಮತ್ತು ಮಾಜಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23 ರಂದು ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು. ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಲಘು ವಿಮಾನವನ್ನು ಸಂಜಯ್ ಗಾಂಧಿ ಅವರೇ ಚಲಾಯಿಸುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿತ್ತು.
ಮಾಧವರಾವ್ ಸಿಂಧಿಯಾ:
ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟಂಬರ್ 30 ರಂದು ಉತ್ತರಪ್ರದೇಶದ ಕಾನ್ಪುರದಲ್ಲಿ ರಾಜಕೀಯ ರ್ಯಾಲಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು.
ಜಿ.ಎಂ.ಸಿ ಬಾಲಯೋಗಿ
ಮಾಜಿ ಲೋಕಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಜಿ.ಎಂ.ಸಿ ಬಾಲಯೋಗಿ ಅವರಿದ್ದ ಖಾಸಗಿ ಹೆಲಿಕಾಪ್ಟರ್ 2002ರ ಮಾರ್ಚ್ 3 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿ ಪತನವಾಗಿತ್ತು.
ಸಿಪ್ರಿಯನ್ ಸಂಗ್ಮಾ:
2004ರ ಸೆಪ್ಟಂಬರ್ 22 ರಂದು ಮೇಘಾಲಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಹೆಲಿಕಾಪ್ಟರ್ ಬಾರಾಪನಿ ಸರೋವರದ ಬಳಿ ಪತನವಾಗಿ ಗ್ರಾಮೀಣಾಭಿವೃದ್ಧಿ ಖಾತೆ ಮಾಜಿ ಸಚಿವ ಸಿಪ್ರಿಯನ್ ಸಂಗ್ಮಾ ಅವರು ನಿಧನರಾಗಿದ್ದರು.
ಓ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್:
2005 ರಲ್ಲಿ ಹರಿಯಾಣದ ರಾಜಕಾರಣಿ, ಓಂ ಪ್ರಕಾಶ್ ಜಿಂದಾಲ್ ಮತ್ತು ಕೃಷಿ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಸಹರಾನ್‌ಪುರ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು.
ವೈ.ಎಸ್. ರೆಡ್ಡಿ:
2009ರ ಸೆಪ್ಟಂಬರ್ 2 ರಂದು ಹೆಲಿಕಾಪ್ಟರ್ ದುರಂತದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ್ ರೆಡ್ಡಿ ಅವರು ನಿಧನರಾಗಿದ್ದರು.
ದೋರ್ಜಿ ಖಂಡು:
ಅರುಣಾಚಲ ಪ್ರದೇಶದ ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಅವರ ಹೆಲಿಕಾಪ್ಟರ್ 2011ರ ಎಪ್ರಿಲ್ 30 ರಂದು ಪತನವಾಗಿ ಸಾವನ್ನಪ್ಪಿದ್ದರು.
ವಿಜಯ್ ರೂಪಾನಿ:
ಇತ್ತೀಚೆಗೆ ಅಂದರೆ 2025ರ ಜೂನ್ 12 ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಪ್ರಾಣ ಕಳೆದುಕೊಂಡಿದ್ದರು.
ಜನರಲ್ ಬಿಪಿನ್ ರಾವತ್ :
ಭಾರತದ ಸೇನಾ ಪಡೆಗಳ ಮೊದಲ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ತಮಿಳುನಾಡಿನ ಕೂನೂರ್ ಬಳಿ 2021ರ ಡಿಸೆಂಬರ್ 8 ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.
ಹೋಮಿ ಭಾಭಾ:
ಭಾರತದ ಪರಮಾಣು ಪಿತಾಮಹ ಹೋಮಿ ಜಹಾಂಗೀರ್ ಭಾಭಾ ಅವರು 1966ರ ಜನವರಿ 24 ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ನಿಧನರಾಗಿದ್ದರು.
ನಟಿ ಸೌಂದರ್ಯ:
ದಕ್ಷಿಣ ಭಾರತದ ಪ್ರಸಿದ್ಧ ನಟಿ ಸೌಂದರ್ಯ ಅವರು 2004ರ ಎಪ್ರಿಲ್ 17 ರಂದು ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರಿನ ಹೊರಭಾಗದಲ್ಲಿ ಅಪಘಾತ ಸಂಭವಿಸಿತ್ತು.



