Thursday, January 29, 2026
Thursday, January 29, 2026
spot_img

ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ರಿಟೈರ್ಡ್‌ ನೌಕರನಿಗೆ ಲಕ್ಷ ಲಕ್ಷ ರೂ. ವಂಚನೆ

ಹೊಸದಿಗಂತ ವರದಿ ತುಮಕೂರು :

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಿವೃತ್ತ ನೌಕರನಿಗೆ ಬೆದರಿಕೆ ಒಡ್ಡಿ, 3.90 ಲಕ್ಷ ವಂಚಿಸಲಾಗಿದೆ. ಈ ಸಂಬಂಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮೆಳೆಕೋಟೆಯ ಟೂಡಾ ಬಡಾವಣೆಯ ಎಂ.ಡಿ.ಲೋಕೇಶ್ ಅವರಿಗೆ ಕರೆ ಮಾಡಿದ ವಂಚಕರು ಮುಂಬೈ ಪೊಲೀಸ್ ರ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದಾರೆ.
ನಿಮ್ಮ ಆಧಾರ್ ಕಾರ್ಡ್ ಬಳಸಿ ಸಿಮ್ ಖರೀದಿಸಿ ಮುಂಬೈನಲ್ಲಿ ಬಳಸಲಾಗುತ್ತಿದೆ. ನಿಮ್ಮ ಹೆಸರಿನಲ್ಲಿ ಇಲ್ಲಿನ ಬ್ಯಾಂಕ್ ನಲ್ಲಿ ಖಾತೆ ತೆರೆದು ಎಟಿಎಂ ಪಡೆಯಲಾಗಿದೆ. ಮದ್ದು, ಗುಂಡು ಖರೀದಿ, ಚಿನ್ನ ಅಕ್ರಮ ಸಾಗಾಟಕ್ಕೆ ಹಣ ಬಳಸಲಾಗುತ್ತಿದೆ. ನೀವು ಪಿ ಎಫ್ ಐ (PFI) ಭಯೋತ್ಪಾದಕರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀರಿ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸ ಬೇಕಾಗುತ್ತದೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ. ತನಿಖೆ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ ಕುಟುಂಬಸ್ಥರಿಗೆ ಈ ವಿಷಯ ತಿಳಿಸಬಾರದು ಎಂದು ಶರತ್ತು ಹಾಕಿದ್ದಾರೆ. ಲೋಕೇಶ್ ಅದರಂತೆ ಮಾಡಿದ್ದು ಪಂಚಕರು ಹೇಳಿದ ಹಾಗೆ ವಿವಿಧ ಖಾತೆಗಳಿಗೆ 3.90 ಲಕ್ಷ ವರ್ಗಾಯಿಸಿದ್ದಾರೆ. ಕೊನೆಗೆ ಮನೆಯಲ್ಲಿ ವಿಚಾರಿಸಿದ ನಂತರ ಇದು ಬೆದರಿಕೆ ಕರೆ ಎಂಬುದು ಗೊತ್ತಾಗಿದೆ. ಹಣ ಪಡೆದು ವಂಚಿಸಿದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಶಿಕ್ಷಕನಿಗೆ 19 ಲಕ್ಷ ವಂಚನೆ; ಟ್ರೇಡಿಂಗ್ ಮೇಲೆ ಹಣ ಹೂಡಿಕೆ

ತುಮಕೂರು: ಟ್ರೇಡಿಂಗ್ ಮೇಲೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಅಂತರಸನಹಳ್ಳಿ ಎಸ್ ಎಲ್ ಎನ್ ಬಡಾವಣೆಯ ಶಿಕ್ಷಕ ಕೆ. ಎಲ್. ರವಿಶಂಕರ ಎಂಬುವರು 19.21 ಲಕ್ಷ ಹಣ ಕಳೆದುಕೊಂಡಿದ್ದಾರೆ. ವಾಟ್ಸಪ್ ಮೂಲಕ ಪರಿಚಯವಾದ ಆರೋಪಿಗಳು ಟ್ರೇಡಿಂಗ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಂತರ ಲಿಂಕ್ ಕಳಿಸಿ. DC FIN ಆಪ್ ಇನ್ಸ್ಟಾಲ್ ಮಾಡಿ ಖಾತೆ ಆರಂಭಿಸುವಂತೆ ತಿಳಿಸಿದ್ದಾರೆ. ರವಿಶಂಕರ ಅದರಂತೆ ಮಾಡಿದ್ದು, ವಂಚಕರು ಹೇಳಿದ ಯುಪಿಐ ಐ.ಡಿ.ಗೆ 70 ಸಾವಿರ ವರ್ಗಾಯಿಸಿದ್ದಾರೆ. ಆಪ್ ನಲ್ಲಿ ಶೇ.6 ರಷ್ಟು ಲಾಭ ಬಂದಿರುವುದಾಗಿ ತೋರಿಸಿದೆ. ನಿಮಗೆ ಇಷ್ಟ ಬಂದಾಗ ಹಣ ವಿತ್ ಡ್ರಾ ಮಾಡಿಕೊಳ್ಳಬಹುದು. ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ 19.60 ಲಕ್ಷ ವರ್ಗಾಯಿಸಿದ್ದಾರೆ. ಆಪ್ ನ ಖಾತೆಯಲ್ಲಿ 50 ಲಕ್ಷ ಹಣ ಇರುವುದಾಗಿ ತೋರಿಸಿದೆ. ಜ. 12ರಂದು ಹಣ ವಿತ್ ಡ್ರಾ ಮಾಡಿಕೊಳ್ಳಲು ಹೋದಾಗ ಕಮಿಷನ್ 1 ಲಕ್ಷ ನೀಡಿದರೆ ಹಣ ವಾಪಸ್ ಬರುತ್ತದೆ ಎಂದು ಆರೋಪಿಗಳು ಕೇಳಿದ್ದಾರೆ. ರವಿ ಹಣ ವರ್ಗಾಯಿಸಿದ್ದು ಇದಾದ ಬಳಿಕ ಸರ್ವರ್ ಬ್ಯೂಜಿ ಇದೆ 2-3 ದಿನಗಳಲ್ಲಿ ನಿಮಗೆ ಹಣ ಸಿಗುತ್ತದೆ ಎಂದಿದ್ದಾರೆ. ಜನವರಿ 15ರಂದು ಮತ್ತೆ ಹಣ ಪಡೆಯಲು ಪ್ರಯತ್ನಿಸಿದಾಗ ‘DC FIN ‘ ಆಪ್ ನಿಷ್ಕ್ರಿಯವಾಗಿದೆ. ವಾಟ್ಸಪ್ ನಂಬರಿಗೆ ಕರೆ ಮಾಡಿದಾಗ ಪಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ವಂಚನೆಗೆ ಒಳಗಾದ ವಿಚಾರ ತಿಳಿದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !