ಹೊಸದಿಗಂತ ಡಿಜಿಟಲ್ ಡೆಸ್ಕ್
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸತತ ಮೂರು ಪಂದ್ಯ ಗೆದ್ದು ಬೀಗುತ್ತಿದ್ದ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ಬ್ರೇಕ್ ಹಾಕಿದೆ. ನಾಲ್ಕನೇ ಪಂದ್ಯದಲ್ಲಿ ಕಿವೀಸ್ ಪಡೆ 50 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಸರಣಿಯಲ್ಲಿ ಮೊದಲ ಗೆಲುವಿನ ಖಾತೆ ತೆರೆದಿದೆ. ಭಾರತ ಈಗಾಗಲೇ ಸರಣಿಯನ್ನು ಕೈವಶ ಮಾಡಿಕೊಂಡಿದ್ದರೂ, ಈ ಸೋಲು ಕ್ಲೀನ್ ಸ್ವೀಪ್ ಮಾಡುವ ಆಸೆಗೆ ತಣ್ಣೀರೆರಚಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಆರಂಭಿಕರಾದ ಟಿಮ್ ಸೀಫರ್ಟ್ (62 ರನ್, 36 ಎಸೆತ) ಮತ್ತು ಡೆವೊನ್ ಕಾನ್ವೇ (44 ರನ್, 23 ಎಸೆತ) ಅವರ ಶತಕದ ಜೊತೆಯಾಟದ ನೆರವಿನಿಂದ ಅಬ್ಬರಿಸಿತು. ಮಧ್ಯಮ ಕ್ರಮಾಂಕದಲ್ಲಿ ಡ್ಯಾರಿಲ್ ಮಿಚೆಲ್ (39) ಮತ್ತು ಗ್ಲೆನ್ ಫಿಲಿಪ್ಸ್ (24) ಸಾಹಸದಿಂದ ಕಿವೀಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಭಾರತದ ಪರ ಅರ್ಶ್‌ದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.
ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಆದರೆ, ಶಿವಂ ದುಬೆ ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಕೇವಲ 15 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ ಬಾರಿಸಿದ ದುಬೆ (65 ರನ್, 23 ಎಸೆತ), ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ 15ನೇ ಓವರ್‌ನಲ್ಲಿ ನಡೆದ ದುರದೃಷ್ಟಕರ ರನೌಟ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಹರ್ಷಿತ್ ರಾಣಾ ಹೊಡೆದ ಚೆಂಡು ಬೌಲರ್ ಮ್ಯಾಟ್ ಹೆನ್ರಿ ಕೈಗೆ ತಗುಲಿ ವಿಕೆಟ್‌ಗೆ ಬಡಿಯಿತು, ಈ ವೇಳೆ ದುಬೆ ಕ್ರೀಸ್‌ನಿಂದ ಹೊರಗಿದ್ದರು.
ದುಬೆ ನಿರ್ಗಮನದ ನಂತರ ಭಾರತದ ಬ್ಯಾಟಿಂಗ್ ಲೈನ್-ಅಪ್ ಕುಸಿಯಿತು. ರಿಂಕು ಸಿಂಗ್ (39) ಮತ್ತು ಸಂಜು ಸ್ಯಾಮ್ಸನ್ (24) ಸ್ವಲ್ಪ ಹೊತ್ತು ಹೋರಾಡಿದರೂ ತಂಡವನ್ನು ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್ ಕಾರ್ಡ್:
ನ್ಯೂಜಿಲೆಂಡ್: 215/7 (20 ಓವರ್)
ಭಾರತ: 165/10 (18.4 ಓವರ್)
ಪ್ರಮುಖ ಬೌಲರ್: ಮಿಚೆಲ್ ಸ್ಯಾಂಟ್ನರ್ (3 ವಿಕೆಟ್)



