ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂದು ಕರ್ನಾಟಕದಾದ್ಯಂತ ವಾಯು ಗುಣಮಟ್ಟದಲ್ಲಿ ಏರುಪೇರು ಕಂಡುಬಂದಿದೆ. ರಾಜಧಾನಿ ಬೆಂಗಳೂರು ಮತ್ತು ಕರಾವಳಿಯ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟವು ‘ಸಾಧಾರಣ’ದಿಂದ ‘ಕಳಪೆ’ ಹಂತಕ್ಕೆ ತಲುಪಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ನಗರದ ಪೀಣ್ಯ ಮತ್ತು ಕೆಂಪೇಗೌಡ ರಸ್ತೆ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 200ರ ಗಡಿ ದಾಟಿದೆ. ಜಯನಗರ ಮತ್ತು ಬನಶಂಕರಿಯಲ್ಲಿ 120-150ರ ಆಸುಪಾಸಿನಲ್ಲಿದ್ದರೆ, ವೈಟ್‌ಫೀಲ್ಡ್‌ನಲ್ಲಿ ಕಟ್ಟಡ ಕಾಮಗಾರಿಗಳಿಂದಾಗಿ ಧೂಳಿನ ಮಾರುತ ಎದ್ದಿದೆ.
ಆಶ್ಚರ್ಯಕರ ರೀತಿಯಲ್ಲಿ ಮಂಗಳೂರಿನಲ್ಲಿ ಮಾಲಿನ್ಯದ ಮಟ್ಟ ಬೆಂಗಳೂರನ್ನು ಮೀರಿಸಿದ್ದು, PM2.5 ಕಣಗಳ ಪ್ರಮಾಣ 79 µg/m³ ದಾಖಲಾಗಿದೆ. ಉಡುಪಿಯಲ್ಲಿಯೂ AQI ಮಟ್ಟ 167ಕ್ಕೆ ತಲುಪುವ ಮೂಲಕ ಕಳಪೆ ಹಂತ ತಲುಪಿದೆ.
ಬೆಳಗಾವಿ, ಕಲಬುರಗಿ ಮತ್ತು ಕಾರವಾರದಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು, ರಾಜ್ಯದ ಉಳಿದ ಭಾಗಗಳಿಗಿಂತ ಗಾಳಿಯ ಗುಣಮಟ್ಟ ಉತ್ತಮವಾಗಿದೆ.
ದಕ್ಷಿಣ ಒಳನಾಡಿನಲ್ಲಿ ಇಂದು ಮುಂಜಾನೆ ಕಂಡುಬಂದ ದಟ್ಟ ಮಂಜು ಮಾಲಿನ್ಯಕಾರಕ ಕಣಗಳನ್ನು ಭೂಮಿಯ ಸಮೀಪವೇ ಹಿಡಿದಿಟ್ಟಿದೆ. ಇದರೊಂದಿಗೆ ರಸ್ತೆ ಕಾಮಗಾರಿ, ವಾಹನಗಳ ಹೊಗೆ ಮತ್ತು ತೇವಾಂಶದ ಕಾರಣದಿಂದ ಗಾಳಿಯ ಗುಣಮಟ್ಟ ಕ್ಷೀಣಿಸಿದೆ.



