ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಲಂಬಿಯಾ–ವೆನೆಜುವೆಲಾ ಗಡಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ವಿಮಾನ ದುರಂತದಲ್ಲಿ ಸಂಸದ ಸೇರಿ 15 ಮಂದಿ ಮೃತಪಟ್ಟಿದ್ದಾರೆ. ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ವಿಮಾನವು ಅಪಘಾತಕ್ಕೀಡಾಗಿ ಯಾರೂ ಬದುಕುಳಿದಿಲ್ಲ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಕುಕುಟಾದಿಂದ ಓಕಾನಾಕ್ಕೆ ತೆರಳುತ್ತಿದ್ದ ಬೀಚ್‌ಕ್ರಾಫ್ಟ್ 1900 ಟ್ವಿನ್–ಪ್ರೊಪೆಲ್ಲರ್ ವಿಮಾನವು ಲ್ಯಾಂಡಿಂಗ್ ಹಂತದಲ್ಲಿ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎನ್ನಲಾಗಿದೆ. ವಿಮಾನದಲ್ಲಿ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಅಪಘಾತ ಸಂಭವಿಸಿದ ಪ್ರದೇಶ ಪರ್ವತಮಯವಾಗಿದ್ದು, ಹವಾಮಾನ ಅಸ್ಥಿರತೆ ಹೆಚ್ಚಿರುವ ವಲಯವಾಗಿರುವುದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ.
ವಿಮಾನದಲ್ಲಿದ್ದವರಲ್ಲಿ ಕೊಲಂಬಿಯಾ ಸಂಸತ್ ಸದಸ್ಯರೊಬ್ಬರು ಮತ್ತು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಯೊಬ್ಬರು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದುರಂತದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಕೊಲಂಬಿಯಾ ವಾಯುಪಡೆಯನ್ನು ನಿಯೋಜಿಸಲಾಗಿದೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.



