ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 4ನೇ ಟಿ20 ಪಂದ್ಯವು ಈಗ ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಟೀಮ್ ಇಂಡಿಯಾದ ಆಂತರಿಕ ನಿರ್ಧಾರಗಳ ಕಾರಣದಿಂದಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ ಟಾಸ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್, “ಇಶಾನ್ ಕಿಶನ್ ಸಣ್ಣ ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯ ಆಡುತ್ತಿಲ್ಲ” ಎಂದು ಘೋಷಿಸಿದ್ದರು. ಆದರೆ ಮೈದಾನದಲ್ಲಿ ಕಂಡ ದೃಶ್ಯಗಳೇ ಬೇರೆ ಕಥೆ ಹೇಳುತ್ತಿವೆ.

ಪಂದ್ಯ ಆರಂಭವಾಗುವ ಮುನ್ನ ಇಶಾನ್ ಕಿಶನ್ ಪೂರ್ಣ ಪ್ರಮಾಣದ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು. ಅಷ್ಟೇ ಅಲ್ಲದೆ, ಪಂದ್ಯದುದ್ದಕ್ಕೂ ಅವರು ‘ವಾಟರ್ ಬಾಯ್’ ಆಗಿ ಮೈದಾನಕ್ಕೆ ಓಡುತ್ತಾ ಬರುತ್ತಿದ್ದ ರೀತಿ ನೋಡುಗರಲ್ಲಿ ಅನುಮಾನ ಮೂಡಿಸಿದೆ. ಒಂದು ವೇಳೆ ನಿಜವಾಗಿಯೂ ಅವರಿಗೆ ‘ನಿಗಲ್ ಇಂಜುರಿ’ ಇದ್ದಿದ್ದರೆ, ವಿಶ್ರಾಂತಿ ನೀಡುವ ಬದಲು ಅವರನ್ನು ಮೈದಾನದಲ್ಲಿ ಓಡಾಡುವ ಕೆಲಸಕ್ಕೆ ಬಳಸಿಕೊಂಡಿದ್ದೇಕೆ ಎಂಬುದು ಅಭಿಮಾನಿಗಳ ಪ್ರಶ್ನೆ.
ಇಶಾನ್ ಕಿಶನ್ ಅವರ ಫಿಟ್ನೆಸ್ ಮೈದಾನದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಮತ್ತು ಕೋಚ್ ಗೌತಮ್ ಗಂಭೀರ್ ನಡೆಯನ್ನು ಪ್ರಶ್ನಿಸುತ್ತಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ಆಟಗಾರನನ್ನು ಬೇಕೆಂದೇ ಗಾಯದ ನೆಪವೊಡ್ಡಿ ಪ್ಲೇಯಿಂಗ್ ಇಲೆವೆನ್‌ನಿಂದ ದೂರ ಇಡಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ನಿಗಲ್ ಇಂಜುರಿ ಎಂದರೆ ಸಣ್ಣ ಸ್ನಾಯು ಸೆಳೆತ ಅಥವಾ ನೋವು ಎಂದರ್ಥ. ಇಂತಹ ಸಂದರ್ಭದಲ್ಲಿ ಆಟಗಾರನಿಗೆ ಹೆಚ್ಚಿನ ಶ್ರಮ ನೀಡದೆ ವಿಶ್ರಾಂತಿ ನೀಡಲಾಗುತ್ತದೆ. ಆದರೆ ಇಶಾನ್ ಕಿಶನ್ ಮೈದಾನದಲ್ಲಿ ಲವಲವಿಕೆಯಿಂದ ಓಡುತ್ತಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿರುವುದು ಈಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.



