ಹೊಸದಿಗಂತ ಡಿಜಿಟಲ್ ಡೆಸ್ಕ್
ಮಲೆನಾಡಿನಲ್ಲಿ ಮಂಗನ ಕಾಯಿಲೆ ಮತ್ತೆ ಅಟ್ಟಹಾಸ ಮೆರೆಯಲಾರಂಭಿಸಿದ್ದು, ತೀರ್ಥಹಳ್ಳಿ ತಾಲೂಕಿನ ಸಸಿತೋಟ ನಿವಾಸಿ ಕಿಶೋರ್ (29) ಎಂಬ ಯುವಕ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ ಜನವರಿ 20ರಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ಕಿಶೋರ್ ಅವರಿಗೆ ಮೊದಲು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಜ್ವರ ನಿಯಂತ್ರಣಕ್ಕೆ ಬಾರದೆ ರೋಗಲಕ್ಷಣಗಳು ಉಲ್ಬಣಗೊಂಡವು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ, ಜ.25ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯ ತಜ್ಞ ವೈದ್ಯರ ತಂಡ ಕಿಶೋರ್ ಅವರನ್ನು ಉಳಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದರೂ, ಸೋಂಕಿನ ತೀವ್ರತೆ ಹೆಚ್ಚಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಈ ಸಾವಿನಿಂದ ತೀರ್ಥಹಳ್ಳಿ ಭಾಗದ ಜನರಲ್ಲಿ ಆತಂಕ ಮನೆಮಾಡಿದ್ದು, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.



