ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ, ಅವರ ಅಂತ್ಯಕ್ರಿಯೆ ಬಾರಾಮತಿಯಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಅವರ ರಾಜಕೀಯ ಜೀವನಕ್ಕೆ ಸಾಕ್ಷಿಯಾದ ಹಾಗೂ ಜನ್ಮಭೂಮಿಯಾದ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಸಾವಿರಾರು ಜನರ ನಡುವೆ ಅವರಿಗೆ ಭಾವನಾತ್ಮಕ ವಿದಾಯ ಸಲ್ಲಿಸಲಾಯಿತು.
ಅಂತ್ಯಕ್ರಿಯೆಗೂ ಮುನ್ನ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ “ಅಜಿತ್ ಪವಾರ್ ಅಮರ ರಹೇ” ಎಂಬ ಘೋಷಣೆಗಳು ಮೊಳಗಿದರೆ, ಬೆಂಬಲಿಗರು ಕಣ್ಣೀರೊಂದಿಗೆ ತಮ್ಮ ನಾಯಕನನ್ನು ನೆನಪಿಸಿಕೊಂಡರು. ಎನ್‌ಸಿಪಿ ಕಾರ್ಯಕರ್ತರು, ರಾಜಕೀಯ ನಾಯಕರು, ಕುಟುಂಬದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಮಹಾರಾಷ್ಟ್ರ ಸರ್ಕಾರದಿಂದ ಪೂರ್ಣ ಸರ್ಕಾರಿ ಗೌರವ ನೀಡಲಾಗಿದ್ದು, ಮೃತದೇಹವನ್ನು ರಾಷ್ಟ್ರಧ್ವಜ ಹೊದಿಸಿ ಪೊಲೀಸ್ ಮತ್ತು ಭದ್ರತಾ ಪಡೆಗಳು ಗೌರವ ವಂದನೆ ಸಲ್ಲಿಸಿದವು. ಸೇನಾ ಸಿಬ್ಬಂದಿಯ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು.



